Friday, February 1, 2013

"ಮಂತ್ರ-ವಿಜ್ಞಾನ" - 1


  ನಮ್ಮ ಸುತ್ತಲಿನ ದೇವತಾರಾಧನೆಗೆ ಸಂಬಂಧಿಸಿದ ಸಂಗತಿಗಳನ್ನೊಮ್ಮೆ ಅವಲೋಕಿಸಿದರೆ, ಮಂತ್ರಗಳಿಗೆ ಉಳಿದೆಲ್ಲಕ್ಕಿಂತ ಹೆಚ್ಚಿನ ಪ್ರಾಧಾನ್ಯ ಇರುವಂತೆ ತೋರಿಬರುತ್ತದೆ. ಧ್ಯಾನ, ಪ್ರಾರ್ಥನ, ವಂದನ ಇತ್ಯಾದಿಗಳಿಗಿಂತ ಮಂತ್ರ ಬದುಕಿನ ಲೌಕಿಕ-ಪಾರಮಾರ್ಥಿಕ ಲೋಕಗಳ ಪ್ರಮುಖ ಕೊಂಡಿಯಾಗಿ ಪರಿಣಮಿಸಿದೆ. ’ಕರಾಗ್ರೆ ವಸತೇ’ ಎಂಬ ಪ್ರಭು ರಾಮನ ಸ್ಮರಣೆ ಇಂದ ಪ್ರಾರಂಭವಾದ ದಿನ ’... ದುಸ್ಸ್ವಪ್ನ ನಾಶನಂ’ ಎಂಬ ರಾಮದಾಸ ಹನುಮಂತನ ಸ್ಮರಣೆಯಲ್ಲಿ ಮುಕ್ತಾಯ. ಹುಟ್ಟಿದ ಮಗುವಿನ ಕಿವಿಯಲ್ಲಿ ನಾರಾಯಣ ಮಂತ್ರಜಪದ ಉಚ್ಚಾರಣೆಯಿಂದ ಪ್ರಾರಂಭವಾದ ಬಾಳಾಟ ಅಪರಸಂಬಂಧಿ ಮಂತ್ರಗುಚ್ಚಗಳಲ್ಲಿ ಮುಕ್ತಾಯ. ವಿಘ್ನವಿನಾಶಕನ ಮಂತ್ರದಿಂದ ಮಂಗಳಾದಿಗೊಂಡ ಕಾರ್ಯವೊಂದಕ್ಕೆ ಮುಕ್ತಾಯ ನೀಡುವುದು ಮಂಗಳಮಯನಾದ ಹರಿಯ ಮಂತ್ರ. ಬದುಕಿನ ಪ್ರತಿಮಜಲಿನಲ್ಲಿ ಎದುರಾಗುವ ಒಳಿತು-ಕೆಡುಕುಗಳಿಗೆಲ್ಲ ಒಂದೊಂದು ಮಂತ್ರ.  ಉಳುಕಿಗೆ ಮಂತ್ರ, ಮನದ ಅಳುಕಿಗೆ ಮಂತ್ರ, ಬಾಳ ಹುಳುಕಿಗೆ ಮಂತ್ರ, ಭವದ ಕೊಳಕಿಗೆ ಮಂತ್ರ... ಮಂತ್ರದ ಬಳಕೆಯಿಲ್ಲದ ಕ್ಷಣವೊಂದು ಭಾರತೀಯನ ಬದುಕಿನಲ್ಲಿ ಇಲ್ಲವೇ ಇಲ್ಲವೇನೋ ಎಂಬ ಹಾಗಿದೆ ಜೀವನದ ಆದ್ಯಂತವಾಗಿ ವ್ಯಾಪಿಸಿರುವ ಮಂತ್ರಜಾಲ!

     ಬಾಳಿನ ಪ್ರತಿ ಸಂಗತಿಯನ್ನೂ ಮಂತ್ರದೊಂದಿಗೆ ತನ್ಮೂಲಕ ಭಗವಂತನೊಂದಿಗೆ ಜೋಡಿಸುವ ಆರ್ಷ ಪರಂಪರೆ ಒಂದೆಡೆಯಾದರೆ,  ಭೌತಿಕ ಮಾಪಕಗಳ ಮೇಲೆ ಎಲ್ಲವನ್ನೂ ಅಳೆಯ ಹೊರಡುವ ನವೀನ ಜನಾಂಗ ಒಂದೆಡೆ. ಅಂತರಂಗದಲ್ಲಿ ಕಾಣುವ ಭೌಮಾನುಭೂತಿಯನ್ನು ಚರ್ಮಚಕ್ಷುಸ್ಸಿನಿಂದ ಕಾಣಲಾಗದೆಂಬ ಪಾರಂಪರಿಕ ನಂಬಿಕೆ ಹಳೆಬೇರಿಗಾದರೆ ಎಲ್ಲವನ್ನು ಭೌತಿಕ ಸಾಮಗ್ರಿಗಳ ಸಹಾಯದಿಂದ ಇಂದ್ರಿಯಗಳ ಮೂಲಕ ಅಳೆದೇವೆಂಬ ಹಮ್ಮು ಹೊಸ ಚಿಗುರಿಗೆ. ನಂಬಿಕೆ ಶ್ರದ್ಧೆಗಳಿಲ್ಲದೆ ಸತ್ಯ ಕಾಣದು ಎನ್ನುವ ವಾದ ಒಂದೆಡೆಯಾದರೆ 'ಸತ್ಯ ಕಾಣದೆ ನಂಬಿಕೆ ಇಡೆನು' ಎಂಬ ವಾದ ಇನ್ನೊಂದೆಡೆ. ಹಾಗಾಗಿ ಎತ್ತು ಏರಿಗೆ ಕೋಣ ನೀರಿಗೆ ಎಂಬಂತೆ ಹಳೆ-ಹೊಸ ತಲೆಮಾರಿನ ನಡುವೆ ದಿನದಿನವೂ ವಿಸ್ತರಿಸುತ್ತಿದೆ ಕಂದಕ. 

     ಇಂತಹ ವೈಪರೀತ್ಯಕ್ಕೆ ಕಾರಣವಿಷ್ಟೆ. ಒಂದು ಅಂತರಂಗವನ್ನು ಹುಡುಕುವ ವಿಜ್ಞಾನವಾದರೆ ಮತ್ತೊಂದರ ಸತ್ಯದ ಹುಡುಕಾಟ ಬಹಿರಂಗದಲ್ಲಿ. ಅಂತರಂಗದಲ್ಲಿ ಸತ್ಯವನ್ನು ಕಂಡುಕೊಂಡ ಮನೀಷಿಗಳಿಗೆ ಬಹಿರಂಗದ, ಅಂತರಂಗದ ಸತ್ಯಕ್ಕೆ ಪೂರಕವಲ್ಲದ ಸಂಗತಿಗಳು ಮಹತ್ತ್ವದ್ದೆನಿಸದಿದ್ದರೆ  ಬಹಿರಂಗದ ಭೌತಿಕ ಸಾಮಗ್ರಿಗಳಲ್ಲಿ ಸತ್ಯಶೋಧನೆಯಲ್ಲಿ ನಿರತರಾದವರಿಗೆ ಅಂತರಂಗದ ಕಡೆಗೆ ಗಮನವೀಯಲು ವ್ಯವಧಾನವಿಲ್ಲ.
 ಹಾಗಾದರೆ ಎರಡನ್ನೂ ಏಕತ್ರಗೊಳಿಸುವ, ಆಧುನಿಕ ವಿಜ್ಞಾನದ ನೋಟದಿಂದ ಆರ್ಷವಿಜ್ಞಾನದ ಸಂಗತಿಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನಗಳು ನಡದೇ ಇಲ್ಲವೇ ಎಂದು ಹುಡುಕ ಹೊರಟರೆ ಪರಿಸ್ಥಿತಿ ಅಷ್ಟೇನೂ ಚಿಂತಾದಾಯಕವಾಗಿಲ್ಲ ಎಂದು ಕಂಡುಬರುತ್ತದೆ. ಸನಾತನೋಕ್ತ ಸಂಗತಿಗಳನ್ನು ತನ್ನದೇ ವಿಧಾನದಲ್ಲಿ ಅಳೆಯುವ, ಅರ್ಥಮಾಡಿಕೊಳ್ಳುವ, ನಿರಾಕರಿಸುವ ಯಾ ದೃಢೀಕರಿಸುವ ಪ್ರಯತ್ನಗಳು ಆಧುನಿಕ ವಿಜ್ಞಾನಲೋಕದಲ್ಲಿ ಒಂದಷ್ಟು ನಡೆದಿವೆ. ಇಂತಹ ಬೆಳವಣಿಗೆಗಳ ಬಗೆಗೊಂದು ಬೆಳಕು ಚೆಲ್ಲುವ ಪ್ರಯತ್ನ ಈ ಲೇಖನ ಸರಣಿ. ಈ ಪ್ರಯೋಗಗಳೆಲ್ಲ ಪೂರ್ಣವೇ? ಸತ್ಯವೇ? ಆರ್ಷ-ಆಧುನಿಕ ವಿಜ್ಞಾನಿಗಳ ಮಧ್ಯೆ ಈ ಪ್ರಯೋಗ-ವಿಧಾನ-ಫಲಿತಾಂಶಗಳ ಬಗೆಗೆ ಸಂಪೂರ್ಣ ಸಹಮತ ಏರ್ಪಟ್ಟಿದೆಯೇ? ಎಂಬ ಸಂಗತಿಗಳ ಅಧ್ಯಯನ ಈ ಲೇಖನದ ಉದ್ದೇಶ ಸರ್ವಥಾ ಅಲ್ಲ. ಆರ್ಷ-ಆಧುನಿಕ ವಿಜ್ಞಾನಗಳ ಒಡಂಬಡಿಕೆಗಳಲ್ಲಿ ಆಸಕ್ತಿಯಿರುವ ಮನಸ್ಸುಗಳಿಗೆ 'ಇಲ್ಲಿ ಹೀಗೆ ಇವರು ಪ್ರಯೋಗ ನಡೆಸಿ ಈ ಫಲಿತಾಂಶ ಪಡೆದರು' ಎಂಬ ಸುದ್ದಿಯ ಆಹಾರ ನೀಡುವುದಷ್ಟೇ ಲೇಖನಕ್ಕೆ ಹಾಕಿಕೊಂಡ ಮಿತಿ.

     ಮಂತ್ರಗಳ ಬಗೆಗೆ ಆಧುನಿಕ ವಿಜ್ಞಾನದ ಪ್ರಯೋಗಗಳನ್ನು ಪರಿಶೀಲಿಸುವ ಮುನ್ನ, ಅಸಲಿಗೆ ಮಂತ್ರವೆಂದರೇನು? ಮಂತ್ರಗಳ ಬಗೆಗೆ ಅದನ್ನು ತಂದ ಮಹರ್ಷಿಗಳ ನೋಟವೇನಿತ್ತು ಎಂಬ ಪರಿಚಯ ಮಾಡಿಕೊಳ್ಳೋಣ.

     'ಮನನಾತ್ ತ್ರಾಯತೇ ಇತಿ ಮಂತ್ರಃ| - ಮನನ ಮಾಡುವುದರಿಂದ ರಕ್ಷಿಸುತ್ತದೆ' ಎಂಬುದು ಮಂತ್ರ ಶಬ್ದದ ಅರ್ಥ. ಹಾಗಾದರೆ ಯಾವುದೋ ಶಬ್ದವನ್ನೋ ಶಬ್ದಗುಚ್ಚವನ್ನೋ ಹೇಳಿದ ಮಾತ್ರಕ್ಕೇ ರಕ್ಷಣೆಯಾಗುತ್ತದೆಯೇ? ಮಂತ್ರಕ್ಕೆ ಮಾವಿನಕಾಯಿ ಉದುರುತ್ತದೆಯೇ? ಎಂದರೆ ಮಂತ್ರವನ್ನು ತಂದವರ ನೋಟವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದಾಯ್ತು. 

     ಸಮಸ್ತ ಸೃಷ್ಟಿಯೆಲ್ಲವೂ ಭಗವಂತನ ಉಪಾಧಿಗಳಾದ ಅನೇಕ ದೇವತಾ ಶಕ್ತಿಗಳಿಂದ ನಡೆಸಲ್ಪಡುತ್ತದೆ. ಭಗವಂತನ ಸಾಮ್ರಾಜ್ಯದಲ್ಲಿ ಒಂದೊಂದು ಕಾರ್ಯದ ನಿರ್ವಹಣೆ ಒಂದೊಂದು ಶಕ್ತಿಗಳದ್ದು. ಅವುಗಳೇ ಇಂದ್ರ, ಯಮ, ವರುಣ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ದೇವತೆಗಳು. ಈ ಶಕ್ತಿಗಳಿಗೇಕೆ ದೇವತೆಗಳೆಂಬ ಹೆಸರೆಂದರೆ ಇವುಗಳು ಕೇವಲ ಶಕ್ತಿ ಮಾತ್ರವಲ್ಲದೇ ಅಂತರಂಗದಲ್ಲಿ ಯೊಗಿಯೋರ್ವನಿಗೆ ಇವುಗಳ ಮೂರ್ತರೂಪದ ದರ್ಶನವೂ ಸಾಧ್ಯ ಎಂಬುದಕ್ಕಾಗಿ. ಪ್ರತ್ಯೇಕ ರೂಪ, ಆಕಾರ, ಅಲಂಕಾರಳೊಂದಿಗೆ ಆ ಶಕ್ತಿಯನ್ನು ಅಂತರಂಗದಲ್ಲಿ ಕಂಡುಕೊಂಡ ಯೋಗಿಗಳು, ಆ ಶಕ್ತಿಗಳ ಅನುಗ್ರಹವನ್ನು ಪಡೆಯುವುದು ಸಾಧ್ಯವೆಂದೂ, ಆ ವಿಧಾನ ಇಂತೆಂದೂ ಒಳಕಂಡ ಸತ್ಯವನ್ನು ಹೊರಸಾರಿದರು. ಆ ಮಾರ್ಗವೇ ಮಂತ್ರಗಳು. 
ಮಂತ್ರಗಳೆಂದರೆ ದೇವತೆಯನ್ನು ಪ್ರತಿನಿಧಿಸುವ ಶಬ್ದರೂಪ.  ಮಂತ್ರವೆಂದು ಹೇಳಲ್ಪಡುವ ಶಬ್ದಗುಚ್ಚಗಳಿಗೂ ನಿರ್ದಿಷ್ಟ ದೇವತೆಗೂ ಒಂದು ಅವಿನಾಭಾವ ಸಂಬಂಧದ ಹಿನ್ನೆಲೆಯಲ್ಲಿ ಮಂತ್ರದ ಉಚ್ಚಾರಣೆ ಆ ದೇವತೆಯ ಸಾನ್ನಿಧ್ಯವನ್ನು ತರುತ್ತದೆ ಎಂಬುದು ಆರ್ಷವಿಜ್ಞಾನದ ಮೂಲಭೂತ ಅಂಶ. ಶಕ್ತಿ, ಅದಕ್ಕೊಂದು ಮೂರ್ತರೂಪವಾಗಿ ದೇವತೆ, ಮತ್ತು  ಶಬ್ದಸ್ವರೂಪವಾಗಿ ಮಂತ್ರ ಇವೆಲ್ಲವೂ ಸೃಷ್ಟಿಯಲ್ಲಿ ಸಹಜವಾಗಿ ಇರುವ ಒಂದೇ ವಿಷಯದ ಭಿನ್ನ ಅಭಿವ್ಯಕ್ತಿಗಳು. ವ್ಯಕ್ತಿಯೊಬ್ಬ ಕಲ್ಪಿಸಿದ್ದಲ್ಲ. ಆ ಕಾರಣಕ್ಕೇ ಮಂತ್ರಗಳು ಅಪೌರುಷೇಯ ಎಂದು ಕರೆಯಲ್ಪಡುತ್ತದೆ. ಸೃಷ್ಟಿಯಲ್ಲಿ ಸಹಜವಾಗಿ ಮೊಳಗುತ್ತಿರುವ ಈ ಶಬ್ದಗಳನ್ನು ಅಂತರಂಗದಲ್ಲಿ ಮಹರ್ಷಿಗಳು ಕೇಳಿದ್ದರಿಂದ 'ಶ್ರುತಿ' ಎಂಬುದಾಗಿಯೂ ಮಂತ್ರಗಳನ್ನು ಅಡಕವಾಗಿಸಿಕೊಂಡ ವೇದಕ್ಕೆ ಕರೆಯುತ್ತಾರೆ. ಮಂತ್ರಗಳು ಸೃಷ್ಟಿಯಲ್ಲಿ ಸಹಜವಾಗಿ ಇರುತ್ತವೆ ಎಂಬ ಕಾರಣಕ್ಕೆ ಯಾವ ಮಂತ್ರಕ್ಕೂ 'ರಚಯಿತಾ' ಇರುವುದಿಲ್ಲ. ಮಂತ್ರಕ್ಕೆ 'ದೃಷ್ಟಾರ' ಇರುತ್ತಾನೆ. ಅಂದರೆ ಸೃಷ್ಟಿಯಲ್ಲಿ ಇರುವುದನ್ನು ಆತ ಕಂಡವನು, ಅದು ಆತನದೇ ಕಲ್ಪನೆಯಲ್ಲ ಎಂಬ ಹಿನ್ನೆಲೆಯಲ್ಲಿ ಬಂದ ಶಬ್ದವದು.

     ಅಸಂಖ್ಯ ಶಬ್ದಗಳಿರುವಾಗ ನಿರ್ದಿಷ್ಟ ಶಬ್ದಗಳ ಗುಚ್ಚಕ್ಕೆ ಮಂತ್ರವೆಂಬ ಹೆಸರೇಕೆ ಎಂದರೆ ಅವುಗಳಲ್ಲಿನ ಅಕ್ಷರ ಹಾಗು ಸ್ವರಗಳ ಯೋಜನೆ. ಜೊತೆಗೆ ಈಶ್ವರ ಸಂಕಲ್ಪ. ಮೇಲ್ನೋಟಕ್ಕೆ ಅವು ಕೇವಲ ಶಬ್ದರಾಶಿಯಾದರೂ ಅವುಗಳ ಹಿಂದೆ ಅವು  ಪ್ರತಿನಿಧಿಸುವ ಶಕ್ತಿಯನ್ನು ಸಾಕ್ಷಾತ್ಕಾರಗೊಳಿಸುವ ಒಂದು ವಿಜ್ಞಾನವಿದೆ. ಅಕ್ಷರಗಳ ಸಂಯೋಜನೆ, ಪ್ರತಿ ಅಕ್ಷರಕ್ಕೂ ಅರೋಪಿಸಲ್ಪಟ್ಟ ಸ್ವರಗಳ ಏರಿಳಿತ ( ಉದಾತ್ತ-ಅನುದಾತ್ತ-ಸ್ವರಿತ) ಇವೆಲ್ಲವೂ ಅದರ ಭಾಗಗಳು.  ಇದೆಲ್ಲಕ್ಕೂ ಮುಖ್ಯ ಸಂಗತಿ,  ಮಂತ್ರವೊಂದರ 'ಅರ್ಥ' ಅದರ ಹಿಂದಿನ ದೇವತೆ ಎಂಬುದು. 'ಅರ್ಥ' ಎಂಬ ಶಬ್ದಕ್ಕೆ ನಾವು ಅದನ್ನೇ ಹೋಲುವ ಇನ್ನೊಂದು ಪರಿಚಿತ ಶಬ್ದವನ್ನು ಹೇಳುವ ಪರಿಪಾಠವನ್ನಿಟ್ಟುಕೊಂಡಿದ್ದೇವೆ. ವೃಕ್ಷ ಎನ್ನುವುದರ ಅರ್ಥ ಮರ ಎನ್ನುವ ಹಾಗೆ. ಆದರೆ ನಿಜಕ್ಕೂ ಅರ್ಥವೆಂದರೆ ಮತ್ತೊಂದು ಶಬ್ದವಲ್ಲ, ಬದಲಿಗೆ ಆ ವಸ್ತುವೇ. ಕೃಷ್ಣ ಶಬ್ದದ ಅರ್ಥವೆಂದರೆ ಕೃಷ್ಣನೇ. ಕೃಷ್ಣ ಶಬ್ದವನ್ನು ಅರ್ಥಮಾಡಿಕೊಳ್ಳುವುದೆಂದರೆ ಕೃಷ್ಣನ ಸಾಕ್ಷಾತ್ಕಾರ. ಅದು ಹೇಗೆ ಸಾಧ್ಯವೆಂದರೆ ಅದು ಈಶ್ವರನ ಸಂಕಲ್ಪವೇ ಆಗಿದೆ ಎನ್ನುತ್ತದೆ ತತ್ತ್ವಶಾಸ್ತ್ರ. 'ಅಸ್ಮಾತ್ ಶಬ್ದಾತ್ ಅಯಮರ್ಥೋ ಬೋದ್ಧವ್ಯಃ ಇತಿ ಈಶ್ವರ ಸಂಕಲ್ಪಃ ಶಕ್ತಿಃ'|| ಈ ಶಬ್ದಕ್ಕೆ ಈ ಅರ್ಥ (ಅದರ ಹಿಂದಿನ ವಸ್ತು) ಬರಲಿ ಎಂಬುದು ಸೃಷ್ಟೀಶನ ಸಂಕಲ್ಪವೇ ಆಗಿದೆ. ಹೀಗಾಗಿ ವೃಕ್ಷ ಶಬ್ದವನ್ನು 'ಅರ್ಥ' ಮಾಡಹೊರಟವನಿಗೆ ವೃಕ್ಷದ ಸಾಕ್ಷಾತ್ಕಾರ ಆಗಲೇ ಬೇಕು. ಇದು ಸೃಷ್ಟಿಯ ನಿಯಮ. ಹೀಗಾಗಿ ಮಂತ್ರಗಳ ಪಠನ ಅವುಗಳ ಹಿಂದಿನ ಶಕ್ತಿಯವರೆಗೂ ಕೊಂಡೊಯ್ಯಲೇಬೇಕು. ಅವುಗಳ ಉಚ್ಚಾರಕ್ರಮವರಿತಿರಬೇಕು ಅಷ್ಟೆ. ಆದ್ದರಿಂದಲೇ 'ಶಬ್ದಬ್ರಹ್ಮಣಿ ನಿಷ್ಣಾತ: ಪರಂ ಬ್ರಹ್ಮಾದಿ ಗಚ್ಛತಿ' ಎಂಬ ಮಾತಿದೆ. ಶಬ್ದಗಳ ಮರ್ಮಗಳನ್ನರಿತವನು ಶಬ್ದಗಳ ಹಿಂದಿನ ಮೂಲ ಶಕ್ತಿಯಾದ ಪರಬ್ರಹ್ಮನವರೆಗೂ ಸಾಗಬಲ್ಲ ಎನ್ನುವುದು ತಥ್ಯ.

     ಅಪೌರುಷೇಯವಾದ, ಭಗವತ್ಸಾಕ್ಷಾತ್ಕಾರಕ್ಕೆ ಕಾರಣವಾಗುವ ಈ  ಮಂತ್ರಗಳನ್ನು ವೈದಿಕ ಮಂತ್ರಗಳು ಎಂದು ಕರೆದರು. ಇವುಗಳಲ್ಲದೇ ಲೌಕಿಕ ಮಂತ್ರಗಳು ಎಂಬ ವಿಭಾಗವೂ ಇದೆ. ಓಮ್ ನಮೋ ನಾರಾಯಣಾಯ ಇತ್ಯಾದಿ ಮಂತ್ರಗಳನ್ನು ಲೌಕಿಕ ಮಂತ್ರಗಳೆನ್ನುತ್ತಾರೆ. ಈ ವಿಭಾಗೀಕರಣ ಮಂತ್ರದ ಪರಿಣಾಮದ ದೃಷ್ಟಿಯಿಂದ ಆದುದಲ್ಲ. ಅಧಿಕಾರ ಭೇದದಿಂದ ಆದುದು. ಯಾರಿಗೆ ವೈದಿಕ ಮಂತ್ರಗಳನ್ನು ಹೇಳುವ ಅಧಿಕಾರವಿಲ್ಲವೋ ಅವರು ಗುರೂಪದೇಶದೊಂದಿಗೆ ಲೌಕಿಕ ಮಂತ್ರ ಪಠಣ ಮಾಡಬಹುದು ಎನ್ನುತ್ತಾರೆ ಜ್ಞಾನಿಗಳು.

ಮಂತ್ರಗಳ ಉಚ್ಚಾರಕ್ಕೆ ಮೂರು ಕ್ರಮಗಳು. ಉಚ್ಚೈಃ, ಉಪಾಂಶು ಹಾಗೂ ಮಾನಸ ಎಂಬುದಾಗಿ. ಮನಸ್ಸಿನಲ್ಲಿ ಹೇಳಿಕೊಳ್ಳುವುದು ಮಾನಸವಾದರೆ ಪಿಸುಗುಡುವ ಹಾಗೆ ಹೇಳುವುದು ಉಪಾಂಶು. ಬಾಯಿಯಿಂದ ಶಬ್ದ ಹೊರಬರುವಂತೆ ಹೇಳುವ ಕ್ರಮಕ್ಕೆ ಉಚ್ಚೈಃ ಎಂದು ಹೆಸರು. ಆತ್ಮಸಾಧನೆಗೆ ಹೇಳುವ ಮಂತ್ರಗಳಿಗೆ ಮಾನಸ ಉಚ್ಚರಣೆ ಶ್ರೇಷ್ಠವಾದುದು. ಉಪಾಂಶು ಮಧ್ಯಮ. ಆದರೆ ಲೌಕಿಕ ಪ್ರಯೋಗಗಳಿಗೆ ಶಬ್ದಗಳ ಕೇಳ್ಮೆ ಹೊರಪ್ರಕೃತಿಯ ಹಾಗು ಕೇಳಿದ ವ್ಯಕ್ತಿಗಳ ಮೇಲೆ ಪರಿಣಾಮ ಬೀರುವುದರಿಂದ ಉಚ್ಚೈಃ ಶ್ರೇಷ್ಠ ಎಂಬುದಾಗಿ ಬಲ್ಲವರ ಅಭಿಮತ.

ಇದಿಷ್ಟು ಮಂತ್ರಗಳ ಕುರಿತಾದ ಒಂದು ಪಕ್ಷಿನೋಟ. ಈ ಕುರಿತಾದ ಆಧುನಿಕ ವಿಜ್ಞಾನದ ಪ್ರಯೋಗಗಳ ಕುರಿತು ಮುಂದಿನ ಸಂಚಿಕೆಯಲ್ಲಿ ನೋಡೋಣ.

Friday, May 27, 2011

'ಕಥೆ ಹೇಳಮ್ಮಾ...'

"ಅದೊಂದು ಪುಟ್ಟ ಊರು. ಊರು ಎಂದು ಕರೆಸಿಕೊಳ್ಳಲು ನಿಜಕ್ಕೂ ಆ ಊರಿಗೆ ಕೊಂಚ ಬೇಸರ. ಏಕೆಂದರೆ ಅಲ್ಲಿರುವುದು ಒಂದೇ ಮನೆ. ಆ ಮನೆಗೂ ತನ್ನೊಳಗಿರಿವುದು ಬರಿ ಇಬ್ಬರೇ ಎಂಬ ಬೇಸರ. ಅಲ್ಲಿರುವುದು ಒಬ್ಬ ಅಮ್ಮ, ಮತ್ತು ಅವಳ ಪುಟ್ಟಮಗ ಮಾತ್ರ. ಆ ಪುಟ್ಟ ಹುಡುಗನಿಗೂ ಕೊಂಚ ಬೇಸರವೇ; ಆಡಲು ಓರಗೆಯವರಿಲ್ಲ ಎಂದು.  ಅಮ್ಮನಿಗೆ ಮಗನ ಹೊರತಾದ ಪ್ರಪಂಚವಿಲ್ಲ. ಮಗನಿಗೂ ಅಷ್ಟೇ ಅಮ್ಮನೇ ಪ್ರಪಂಚ. ಆ ಬಾಲಕ ತುಂಬಾ ಜಾಣ.  ನಿನ್ನ ಹಾಗೆ. ಅಷ್ಟೇ ತುಂಟ ಕೂಡ, ಎದುರುಮನೆಯ ಸೋಮೂನ ಹಾಗೆ. ಓರಗೆಯ ಹುಡುಗರಿಲ್ಲದ್ದಕ್ಕಾಗಿ ಅಮ್ಮನೊಂದಿಗೇ ಆತನ ಮಾತು ಆಟ ಊಟ ಎಲ್ಲ. ಪ್ರತೀ ದಿನ ರಾತ್ರಿ ಊಟವಾದಮೇಲೆ ಆ ಪುಟ್ಟ ಬಾಲಕನಿಗೆ ನಿನ್ನ ಹಾಗೆಯೆ ಕಥೆ ಕೇಳ್ತಾ ಮಲಗೋ ಅಭ್ಯಾಸ. ಪ್ರತಿದಿನವೂ ಅಮ್ಮ ಒಂದೊಂದು ಕಥೆ ಹೇಳ್ತಿದ್ಲು. ಆ ಬಾಲಕನಿಗೆ ಇಷ್ಟವಾದ ಕಥೆ ಅಂದ್ರೆ ಕೃಷ್ಣನ ಕಥೆ. ಪೂತನಿ ಕೊಂದಿದ್ದು, ಕಾಳಿಂಗ ಮರ್ದನ ಹೀಗೆ...ದಿನ ಒಂದೊಂದು ಕಥೆ. ಹೀಗೆ ದಿನಕಳೆದು ಹುಡುಗ ದೋಡ್ಡವನಾಗ್ತಾ ಆಗ್ತಾ ಅವನನ್ನ ಶಾಲೆಗೆ ಕಳಿಸೋ ದಿನ ಬಂದೇಬಿಡ್ತು. ತನ್ನನ್ನು ಶಾಲೆಗೆ ಕಳಿಸ್ತಾಳೆ ಅಮ್ಮ ಅಂತ ಆ ಹುಡುಗನಿಗೆ ಭಯ ಸಂತೋಷ ಕುತೂಹಲ ಎಲ್ಲ ಆಯ್ತು. ಸಂತೋಷ ಆಗಿದ್ದು ಓರಗೆಯ ಹುಡುಗರು ಆಡೋಕೆ ಸಿಕ್ತಾರೆ ಅಂತ. ಭಯ ಶಾಲೆಗೆ ಹೋಗೋ ದಾರಿಯ ಬಗ್ಗೆ. ಶಾಲೆಗೂ ಇವರ ಮನೆಗೂ ಮಧ್ಯ ಭಯಂಕರ ಕಾಡು. ‘ಒಬ್ಬನೇ ಹೋಗೋಕೆ ನಂಗೆ ಭಯ’ ಎಂದ. ಅಮ್ಮನಿಗೂ ಅದೇ ಚಿಂತೆ ಇತ್ತು. ಇಷ್ಟು ಪುಟ್ಟ ಹುಡುಗನ್ನ ಹೇಗೆ ಒಬ್ಬನನ್ನೇ ಕಳಿಸೋದು ಅಂತ. ಆಗ ಆಕೆಗೆ ಒಂದು ಯೋಚನೆ ಬಂತು. ಅವಳಿಗೆ ಶ್ರೀಕೃಷ್ಣ ಪರಮಾತ್ಮನ ಮೇಲೆ ತುಂಬಾ ಭಕ್ತಿ. ಅವಳು ಮಗನಿಗೆ ಹೇಳಿದ್ಲು ‘ಮಗು, ನಿನಗೆ ಕೃಷ್ಣನ ಬಗ್ಗೆ ಎಲ್ಲಾ ವಿಷಯ ಹೇಳಿದಿನಿ, ಆದ್ರೆ ಒಂದು ವಿಷಯ ಹೇಳಿಲ್ಲ. ಅವನೇ ನಿನ್ನ ಅಣ್ಣ. ಆ ಕೃಷ್ಣ ನೀನು ಹೋಗ್ತಾ ಇರೋ ಕಾಡಿನಲ್ಲೇ ಇದ್ದಾನೆ’ ಎಂದಳು .  ‘ಕೃಷ್ಣ ನನ್ನಣ್ಣನಾ??!!’ ಹುಡುಗ ಆಶ್ಚರ್ಯದಿಂದ ಕೇಳಿದ. ‘ಹೌದು ಮಗು, ಕೃಷ್ಣ ನಿನ್ನ ಸ್ವಂತ ಅಣ್ಣ. ಕಿಟ್ಟಣ್ಣಾ ಅಂತ ನಿ ಕರಿಬೋದು ಅವನನ್ನು. ಅವನಿಗೆ ತಮ್ಮ ಅಂದ್ರೆ ಬಹಳ ಪ್ರೀತಿ, ತಮ್ಮನಿಗೆ ಪುಸ್ತಕ, ಚೀಲ ಇದೆಲ್ಲ ತರೋಕೆ ದುಡ್ಡು ಬೇಕು ನೋಡು, ಅದನ್ನ ಸಂಪಾದಿಸೋಕೆ ಕಾಡಿಗೆ ಹೋಗಿದ್ದಾನೆ. ಕಾಣಿಸಿಕೊಂಡ್ರೆ ನೀನು ಅವನ ಜೊತೆನೆ ಇರ್ತಿನಿ ಅಂತ ಅಳ್ತಿಯ ಅಂತ ಅವನು ಕಾಣಿಸಿಕೊಳ್ಳದೇ ಇದ್ದಾನೆ. ಆದ್ರೆ ನೀನು ಕಿಟ್ಟಣ್ಣಾ ಅಂತ ಕರ್ದ್ರೆ ಅವನು ಬಂದೇ ಬರ್ತಾನೆ. ನಿನಗೆ ಶಾಲೆಗೆ ಹೋಗುವಾಗ ಭಯ ಆದ್ರೆ ಒಮ್ಮೆ ಕಿಟ್ಟಣ್ಣಾ ಅಂತ ಕರಿ, ಅವನು ಬಂದು ನಿನ್ನ ಹೆದರಿಕೆ ಎಲ್ಲಾನೂ ದೂರ ಮಾಡ್ತಾನೆ, ಆದ್ರೆ ಸುಮ್ಸುಮ್ನೆ ಕರಿಬೇಡ. ತುಂಬಾ ಭಯವಾದಾಗ ಮಾತ್ರ ಕರಿ’ ಅಂತ ಹೇಳಿದ್ಲು.ಬಾಲಕನಿಗೆ ಇನ್ನಿಲ್ಲದಷ್ಟು ಸಂತೋಷ ಆಯ್ತು. ಸರಿ ಎಂದು ಅಣ್ಣನಿದ್ದಾನಲ್ಲ ಎಂಬ ಧೈರ್ಯದಿಂದ ಶಾಲೆಗೆ ನಡದೇ ಬಿಟ್ಟ. ಸ್ವಲ್ಪ ದೂರ ನಡೆದುಕೊಂಡು ಹೋಗ್ತಾ ಇರಬೇಕಾದ್ರೆ ನೋಡ್ತಾನೆ ದಾರಿಲಿ ಒಂದು ಕಪ್ಪು ಹಾವು! ಇಷ್ಟುದ್ದ... ಆ ಪುಟ್ಟ ಹುಡುಗನಿಗೆ ಭಯ ಶುರು ಆಗಿಹೋಯ್ತು. ಹಾವು ಬಂದು ಕಚ್ಚಿದ್ರೆ? ಅಂತ ಯೊಚನೆ ಶುರು ಆಯ್ತು. ಕ್ಷಣ ಕ್ಷಣಕ್ಕೂ ಭಯ ಜಾಸ್ತಿ ಆಗ್ತಾ ಹೋಯ್ತು. ಕೈಕಾಲುಗಳು ಅದುರೋಕೆ ಶುರು ಆಯ್ತು. ಓಡೋಕೂ ಆಗದ ಸ್ಥಿತಿ ಆಯ್ತು. ಆಗ ಆ ಬಾಲಕನಿಗೆ ಅಮ್ಮ ಹೇಳಿದ್ದು ನೆನಪಾಯ್ತು. ಅಣ್ಣನ ಬಗೆಗೆ. ಈಗ ಕಿಟ್ಟಣ್ಣನಲ್ಲದೇ fishing-boy-in-the-forestಇನ್ನ್ಯಾರೂ ತನ್ನನ್ನು ಕಾಪಾಡಲಾರರು ಅನ್ನಿಸಿ ಅವನನ್ನು ಕರೆಯಲು ಕಿಟ್ಟಣ್ಣಾ ಎಂದ. ಯಾರೂ ಓ ಕೊಡಲಿಲ್ಲ. ಇನ್ನೊಮ್ಮೆ ಸ್ವಲ್ಪ ಜೋರಾಗಿ ಕರೆದ. ಉಹುಂ. ಉತ್ತರವಿಲ್ಲ. ಹಾವು ಮುಂದೆ ಬರ್ತಾ ಇದ್ಯೇನೋ ಅನ್ನಿಸಿ ಭಯ ಜಾಸ್ತಿ ಆಗಿ ಕಿಟ್ಟಣ್ಣಾ ಎಂದು ಇನ್ನೂ ಜೋರಾಗಿ ಕೂಗಿದ. ತನ್ನೆಲ್ಲ ಶಕ್ತಿ ಉಪಯೋಗಿಸಿ ಅವನೇ ಗತಿ ಎಂದು ಆರ್ತನಾಗಿ ಕಿಟ್ಟಣ್ಣಾ ಕಿಟ್ಟಣ್ಣಾ ಎಂದು ಹಂಬಲಿಸಿ ಮತ್ತೆ ಮತ್ತೆ ಕೂಗಿದ.  ಭಗವಂತನಿಗೆ ಭಕ್ತರು ಕರೆದರೆ ಕೇಳದೆ ಇರುತ್ಯೆ? ಎಲ್ಲಿ ಯಾವಾಗ ಹೇಗೆ ಕರೆದರೂ ಕೇಳುತ್ತೆ. ಆ ಪುಟ್ಟಬಾಲಕನ ಕೂಗು ವೈಕುಂಠದಲ್ಲಿದ್ದ ವಿಷ್ಣುವಿಗೆ ಕೇಳಿಸ್ತು. ಭಕ್ತರು ಕಷ್ಟದಲ್ಲಿದ್ದಾಗ ಕರುಣಾಮಯಿ ಭಗವಂತ ಸುಮ್ಮನುಳಿಯೋದೇ ಇಲ್ಲ. ಆ ಪುಟ್ಟ ಬಾಲಕನೆದುರು ಗೋಪಾಲಕನ ವೇಷದಲ್ಲಿ ಪ್ರತ್ಯಕ್ಷನಾಗಿಯೇ ಬಿಟ್ಟ. ಹುಡುಗನಿಗೆ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಅಣ್ಣ ಅಣ್ಣಾ ಎಂದು ಕುಣಿದಾಡಿದ. ಕೃಷ್ಣ ಬಂದವನೇ ಹಾವನ್ನು ಓಡ್ಸಿ ಹೇಳ್ದ, ಮಗು ಇನ್ನು ಹೆದ್ರೋದು ಬೇಡ. ನಾನಿನ್ನ ಜೊತೆಗಿದಿನಿ. ಯಾರಿಗೆ ಕಷ್ಟ ಬಂದ್ರೂ ನಾನು ಅವರ ಸಹಾಯಕ್ಕೆ ಬರ್ತಿನಿ. ನಿನ್ನಂತ ಪುಟ್ಟ ಮಕ್ಕಳು ಅಂದ್ರೆ ನಂಗೆ ತುಂಬಾ ಪ್ರೀತಿ, ಬೇಕಾದಾಗ ಕರಿ, ಓಡೋಡಿ ಬರ್ತೀನಿ ಅಂತ ಹೇಳಿ ಶಾಲೆವರೆಗೂ ಕಳಿಸಿಕೊಟ್ಟ. ಅಂದಿನಿಂದ ಆ ಪುಟ್ಟ ಬಾಲಕನಿಗೆ ಶಾಲೆಗೆ ಹೋಗುವಾಗ ಎಂದೂ ಭಯವಾಗಲಿಲ್ಲ. ಜೊತೆಗೆ ಅಣ್ಣನಿದ್ದಾನೆ ಎಂದ ಮೇಲೆ ಭಯವೇಕೆ? ಆ ಪುಟ್ಟ ಬಾಲಕನಿಗೊಬ್ಬನಿಗೆ ಮಾತ್ರ ಅಲ್ಲ. ಆ ಕೃಷ್ಣ ಪರಮಾತ್ಮ ಪುಟ್ಟ ಮಕ್ಕಳಿಗೆಲ್ಲರಿಗೂ ಅಣ್ಣ. ನಿನ್ನಂತ ಪುಟ್ಟ ಮಕ್ಕಳೆಂದರೆ ಅವನಿಗೆ ಬಲು ಪ್ರೀತಿ. ಕರೆದೊಡನೆ ಓಡೋಡಿ ಬರುತ್ತಾನೆ. ನಿನಗೂ ಭಯವಾದಾಗ ಕರೆದು ನೋಡು ಬೇಕಾದ್ರೆ”
ಈ ಕಥೆಯನ್ನೊಮ್ಮೆ ನಿಮ್ಮ ಪುಟ್ಟ ಮಗುವಿನ ಬಳಿ ಕುಳಿತು ಶ್ರದ್ಧೆಯಿಂದ ಹೇಳಿ ನೋಡಿ. ನಿಧಾನವಾಗಿ ಆ ಮಗು ಏನನ್ನೋ ಗಾಢವಾಗಿ ಯೋಚಿಸತೊಡಗುವುದನ್ನೂ ತನ್ನದೇ ಆದ ಕಲ್ಪನಾಲೋಕದಲ್ಲಿ ವಿಹರಿಸುವುದನ್ನು ಕಾಣುತ್ತೀರಿ.

ಮಹನೀಯರೇ, ಅಭಿನಂದನೆಗಳು! ನೀವಿಂದು ನಿಮ್ಮ ಮಗುವಿನ ಮನಸ್ಸಿಗೆ ಹೊಸ ಸಂಸ್ಕಾರವೊಂದನ್ನು ಕೊಟ್ಟಿದ್ದೀರಿ. ಭಾರತೀಯತೆಯ ಅಂತಸ್ಸತ್ವವಾದ ಆಧ್ಯಾತ್ಮದ ಪುಟ್ಟ ಬೀಜವೊಂದನ್ನು ಅವಾಪಿಸಿದ್ದೀರಿ. ನೀವಿಂದು ಹೇಳಿದ್ದು ‘ಅನನ್ಯಾಃಚಿಂತಯಂತೋ ಮಾಮ್’ ಎಂಬ ಗೀತೆಯ ಮಹದುಕ್ತಿಯ ಸರಳ ಭಾವಾರ್ಥ. ಈ ಕಥೆಯ ಮೂಲಕ ನಿಮ್ಮ ಮಗುವಿಗೆ ಕಟ್ಟಿಕೊಟ್ಟಿದ್ದು ‘ಸರ್ವಶಕ್ತನಾದ ಸರ್ವವ್ಯಾಪಕನಾದ ಭಗವಂತನೊಬ್ಬನಿದ್ದಾನೆ, ಪ್ರತಿಯೊಬ್ಬನೂ ಆತನನ್ನು ನೊಡಬಹುದು’ ಎಂಬ ಯಾವ ಭಾರತೀಯ ದರ್ಶನವಿದೆಯೋ ಅದರ ಮೊದಲ ಅನುಭೂತಿ. ಇದಲ್ಲದೇ ನೀವು ಕೊಟ್ಟಿದ್ದು ‘ಶಿಷ್ಟ ರಕ್ಷಕ, ದುಷ್ಟ ಶಿಕ್ಷಕ’ನಾದ ಭಗವಂತ ತನ್ನನ್ನು ಸದಾ ರಕ್ಷಿಸುತ್ತಾನೆ ಎಂಬ ಭಯನಿವಾರಣೆಯ ಮಂತ್ರ.
ಇದನ್ನೆಲ್ಲವನ್ನೂ ನೀವು ಕಥೆಯಲ್ಲದೇ ಬರಿಯ ಮಾತುಗಳಲ್ಲೇ ಅರ್ಥಮಾಡಿಸಲು ತೊಡಗಿದ್ದರೆ?

ಭಾರತೀಯ ಪುರಾಣ, ಕಾವ್ಯ, ಜಾನಪದ ಎಲ್ಲವೂ ರಂಜನೀಯ ಕಥೆಗಳಿಂದಲೇ ತುಂಬಿದೆ ಏಕೆ ಎಂಬ ಪ್ರಶ್ನೆಗೆ ಸಂಕ್ಷೇಪ ಉತ್ತರ ಇದುವೆ. ಅದು ಕೇವಲ ರಂಜನೀಯತೆಗಾಗಿ ರಂಜನೀಯತೆಯನ್ನು ತಂದಿದ್ದಲ್ಲ. ಸೂಕ್ಷ್ಮವೂ ಗಹನವೂ ಆದ ಮಹತ್‌ತತ್ವಗಳನ್ನು ಸರಳವಾಗಿ ಮನಸ್ಸಿನಾಳಕ್ಕೆ ಮುಟ್ಟುವಂತೆ ಮಾಡಲು ದಾರ್ಶನಿಕರು ಕಂಡುಕೊಂಡ ಒಂದು ಸಾಮುದಾಯಿಕ ವಿಧಾನ. ಹಾಗೆಂದು ಎಲ್ಲ ಕಥೆಗಳನ್ನೂ ಒಂದು ನಿರ್ದಿಷ್ಟ ಉದ್ದೇಶವನ್ನಿಟ್ಟುಕೊಂಡು ಅದರ ಸುತ್ತಲೂ ಕಥೆ ಹೆಣೆದಿದ್ದಾರೆ ಎಂಬ ಹಾಗೂ ಇಲ್ಲ. ನೈಜಘಟನೆಗಳನ್ನು ನೀತಿನಿರೂಪಣೆಗಾಗಿ ರಸಮಯವಾಗಿ ವಿವರಿಸುವ ‘ಐತಿಹಾಸಿಕ ಕಥೆಗಳ’ ಪಾಲೂ ಭಾರತೀಯ ಕಥನ ಸಾಮ್ರಾಜ್ಯದಲ್ಲಿ ದೊಡ್ಡದಿದೆ. ಎಷ್ಟೋ ಬಾರಿ ಈ ಐತಿಹಾಸಿಕ ಕಥೆಗಳು ಕಾಲ್ಪನಿಕವೇನೋ ಎನ್ನುವ ಹಾಗೆ ತೋರುತ್ತವೆ.  ಒಂದು ಕಾಲದೇಶದಲ್ಲಿನ ವಾಸ್ತವಗಳು ಮತ್ತೊಂದು ಕಾಲದೇಶಗಳಲ್ಲಿ ಕಾಲ್ಪನಿಕ ಕಥೆಗಳಾಗಿ ತೋರಿಬಂದರೆ, ಅದು ನೋಟಕನ ನೋಟದ ಪರಿಮಿತಿಯನ್ನು ವಿಸ್ತೃತಗೊಳಿಸಲು ವಿಷಯವಿದೆ ಎಂದಾದೀತೇ ವಿನಃ, ವಾಸ್ತವಗಳು ಮಿಥ್ಯೆ, ಕಾಲ್ಪನಿಕ ಎಂದಾಗುವುದಿಲ್ಲ. ಸಹಸ್ರಾರು ವರ್ಷಗಳ ಕಥನಸಾಹಿತ್ಯವನ್ನು ಅವುಗಳ ಕಾಲಘಟ್ಟಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವುದು ಅಸಾಧ್ಯವಾದುದರ ಹಿನ್ನೆಲೆಯಲ್ಲಿ, ಭಾರತೀಯ ಗದ್ಯ-ಕಾವ್ಯಗಳನ್ನು, ಒಂದು ಪ್ರಮೇಯದ ಪರೋಕ್ಷನಿರೂಪಣೆಗಾಗಿ ರಚಿತವಾದವುಗಳು ಎಂದೋ ಅಥವಾ  ನೈಜಘಟನೆಗಳ ರಸಮಯ ಕವಿನೋಟಗಳು ಎಂದೊ ಸರಳವಾಗಿ ಪ್ರಥಕ್ಕರಿಸಲು ದು:ಸಾಧ್ಯ. ಆದರೂ ಸ್ಥೂಲವಾಗಿ, ಸಂಸ್ಕೃತ ವಾಙ್ಮಯದಲ್ಲಿ ರಾಮಾಯಣ ಮಹಾಭಾರತಗಳು ‘ಐತಿಹಾಸಿಕ’ ಎಂದು ವರ್ಗೀಕರಿಸಲ್ಪಟ್ಟರೆ ಪಂಚತಂತ್ರ ಹಿತೋಪದೇಶ ಇತ್ಯಾದಿಗಳು ‘ಕಾಲ್ಪನಿಕ’ಗಳೆಂದು ಗುರುತಿಸಲ್ಪಡುತ್ತವೆ. ಆದರೆ ಪುರಾಣಗಳನ್ನು ಐತಿಹಾಸಿಕ ಕಾಲ್ಪನಿಕಗಳ ಮಿಶ್ರಣ, ಯೋಗಿಗಳು ಅಂತರ್ಮಾರ್ಗದಲ್ಲಿ ಕಂಡ ಸತ್ಯವನ್ನು ಪರೋಕ್ಷವಾಗಿ ತಿಳಿಸಲು ಐತಿಹಾಸಿಕ ಘಟನೆಗಳನ್ನು ಬಳಸಿಕೊಂಡು ಹೇಳಿದರು ಎನ್ನಲಾಗುತ್ತದೆ. ಈ ವರ್ಗೀಕರಣವೇನೇ ಇದ್ದರೂ ಅವೆಲ್ಲವೂ ಭಾರತದ ಸಂಕೀರ್ಣ ಸಂಸ್ಕೃತಿಯ ಒಂದೊಂದು ಮುಖಗಳೇ ಆದ್ದರಿಂದ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಹೋಗುವ ಪ್ರತಿಯೊಬ್ಬನಿಗೂ ಚಿಂತನೆಯ ಸಾಮಗ್ರಿಗಳೇ.

ಭಾರತೀಯ ಜೀವನ ಶೈಲಿಯಲ್ಲಿ ಕಥನ, ಅಖ್ಯಾನಗಳಿಗೆ ಎಲ್ಲಿಲ್ಲದ ಪ್ರಾಧಾನ್ಯತೆ. ನೀತಿ ಧರ್ಮಗಳಲ್ಲದೇ ವ್ಯಾವಾಹಾರಿಕ ಕೌಶಲಗಳನ್ನೂ, ದೈನಂದಿನ ಬದುಕಿಗೆ ಬೇಕಾದ ಯುಕ್ತಿಗಳನ್ನೂ ಕಥೆಯ ಮೂಲಕ ಹೇಳುವುದು ವಾಡಿಕೆ. ಕಥೆಯನ್ನು ಹೇಳುವುದು ಅನಾದಿಕಾಲದಿಂದಲೂ ಜೀವನದ ಭಾಗವಾಗಿತ್ತು ಎನ್ನಲು, ರಾಮನ ಕಥೆಯನ್ನು ವಾಲ್ಮೀಕಿಗಳು ಲವಕುಶರಿಗೆ ಹೇಳಿದುದು, ಸೂತರು ಜನಮೇಜಯನಿಗೆ, ವಿಷ್ಣುಶರ್ಮನು ವಸುಶಕ್ತಿ, ರುದ್ರಶಕ್ತಿಗಳಿಗೆ ಹೇಳಿದ್ದು ಹೀಗೆ ನೂರಾರು ಉದಾಹರಣೆಗಳಿವೆ.
ಅಲ್ಲದೇ ಕಥೆ ಹೇಳುವ ಸಂಪ್ರದಾಯದ ಹಿಂದೆ ವೈವಿಧ್ಯಮಯ ಉದ್ದೇಶಗಳಿರುವುದೂ ಕಂಡು ಬರುತ್ತದೆ. ರಘುವಂಶದ ಇತಿಹಾಸವನ್ನು ವಿಶ್ವಾಮಿತ್ರರು ರಾಮನಿಗೆ ಕಥೆಯ ರೂಪದಲ್ಲಿ ಹೇಳುವುದು ಆತನ ಕುಲದ ಐತಿಹ್ಯವನ್ನು ತಿಳಿಸುವುದಕ್ಕಾದರೆ (ಜ್ಞಾನಪ್ರದಾನ), ಸೂತರು ಕಥೆ ಹೇಳುವುದು ಪಾಪ ಪರಿಹಾರಕ್ಕಾಗಿ. ಪ್ರಾಣಿ ಪಕ್ಷಿಗಳನ್ನೊಳಗೊಂಡ ಪಂಚತಂತ್ರಕಥೆಗಳನ್ನು ವಿಷ್ಣುಶರ್ಮರು ಹೇಳಿದ್ದು ಶತದಡ್ಡರಾಗಿದ್ದ ಅರಸು ಕುವರರಿಗೆ ವಿವೇಕ ಮೂಡಿಸುವ ಸಲುವಾಗಿ. ಯೋಗರಹಸ್ಯಗಳನ್ನು ಕಥೆಯರೂಪದಲ್ಲಿ ಹೇಳಲಾಗಿದ್ದು ಭಾಗವತದಲ್ಲಿ.

ಭಾರತದ ಜಾನಪದದಲ್ಲಿಯೂ ಕಥೆ ಹೇಳುವ ಅನೇಕ ಪ್ರಾಕಾರಗಳನ್ನು ನಾವು ಕಾಣಬಹುದು. ಹರಿಕಥೆ, ರಾಮಕಥೆ, ಬುರ್ರಕಥೆ ಹೀಗೆ. ಇವೆಲ್ಲವೂ ಮೌಖಿಕವಾಗಿ ಕಥೆ ಹೇಳುವ ಪ್ರಾಕಾರಗಳು. ದೃಶ್ಯ (ಅಭಿನಯ)ದ ಮೂಲಕ ಕಥೆ ಹೇಳುವ ಪ್ರಕಾರಗಳಂತೂ ಅಸಂಖ್ಯ.
ಕಥನಕಲೆ ಅಂದಿನ ಬದುಕನ್ನು ಅದೆಷ್ಟು ವ್ಯಾಪಿಸಿತ್ತು ಎನ್ನುವುದನ್ನು ‘ಪನ್’ ಮೂಲಕ ಶ್ಲೋಕವೊಂದು ಹೀಗೆ ಹೇಳುತ್ತದೆ.
ಪ್ರಾತ: ದ್ಯೂತ ಪ್ರಸಂಗೇನ ಮಧ್ಯಾಹ್ನೌ ಸ್ತ್ರೀಪ್ರಸಂಗತ:|
ರಾತ್ರೌ ಚೋರ ಪ್ರಸಂಗೇನ ಕಾಲೌ ಗಚ್ಚತು ಧೀಮತಾಂ||
ಮೇಲ್ನೋಟಕ್ಕೆ, ಬೆಳಗ್ಗೆ ದ್ಯೂತದ ಬಗ್ಗೆ, ಮಧ್ಯಾಹ್ನ ಸ್ತ್ರೀಯರ ಬಗೆಗೆ ರಾತ್ರಿ ಚೋರರ ಬಗೆಗೆ ಧೀಮಂತರು ಮಾತನಾಡುತ್ತಾರೆ ಎಂದೊಡನೇ ಧೀಮಂತರ ಕುರಿತಾದ ಅಣಕದ ಮಾತೇನೋ ಅನ್ನಿಸುತ್ತದೆ. ಆದರೆ ವಿಷಯ ಅದಲ್ಲ. ದ್ಯೂತ ಪ್ರಸಂಗವೆಂದರೆ ಮಹಾಭಾರತ (ಕೌರವ ಪಾಂಡವರ ದ್ಯೂತ). ಸ್ತ್ರೀ ಪ್ರಸಂಗವೆಂದಿರುವುದು ರಾಮಾಯಣದ ಬಗೆಗೆ (ಸೀತೆ). ಚೋರ ಪ್ರಸಂಗವೆಂದರೆ ಕೃಷ್ಣನ ಕಥೆ; ಭಾಗವತ. ಇವುಗಳ ಮೂಲಕ ಸದಾಕಾಲ ಭಗವತ್ಸ್ಮರಣೆಯಲ್ಲಿರಬೇಕು ಎಂಬುದು ಇದರ ತಥ್ಯ.
ಇದೆಲ್ಲವೂ ಗತಕಾಲದ ನೆನಪುಗಳು.

ಬದುಕಿನ ಶೈಲಿ ಬದಲಾಗಿದೆ. ಆಧುನಿಕ ಜೀವನ ಪದ್ಧತಿ ಟೀವಿಯೆಂಬ ಮಾಯಾವಿಯ ಮೂಲಕ ನುಂಗಿಹಾಕಿದ ಭಾರತದ ಅಸಂಖ್ಯ ಅರ್ಥಪೂರ್ಣ ಸಂಪ್ರದಾಯಗಳ ಸಾಲಿಗೆ ಕಥೆ ಹೇಳುವುದೂ ಸೇರಿಹೋಗಿದೆ. ಭಾರತದ ಅಸಲೀ ಜೀವಾಳ ರಾಮಾಯಣ ಮಹಾಭಾರತಗಳೂ ಇಂದಿನ ಮಕ್ಕಳಿಗೆ ಅಪರಿಚಿತವಾಗಿರುವುದು ದುರ್ದೈವ. ಅವುಗಳಲ್ಲಿರುವ ನೀತಿಭೋಧಕ ಉಪಾಖ್ಯಾನಗಳಂತೂ ತಲೆಮಾರುಗಳ ಹಿಂದೆಯೆ ವಾಚಿಕಪರಂಪರೆಯಿಂದ ಕಳಚಿಹೋಗಿವೆ. ‘ಕಥೆ ಹೇಳೋಕೆ ಪುರುಸೊತ್ತು ಯಾರಿಗಿದೆ? ಟೀವಿಯಲ್ಲಿ ನೂರಾರು ಮಾಹಿತಿ ಮತ್ತು ಮನೋರಂಜನಾತ್ಮಕ ಕಾರ್ಯಕ್ರಮಗಳು ಬರುತ್ತವೆ. ನೋಡಿದ್ರೆ ಬುದ್ದಿನೂ ಚುರುಕಾಗುತ್ತೆ, ಟೈಮ್ ಪಾಸೂ ಆಗುತ್ತೆ’ ಎಂದು ನಾವು ಹಲುಬುತ್ತೇವೆ. ಆದರೆ ವಿಷಯ ಅಷ್ಟು ಸರಳವಾಗಿಲ್ಲ ಅನ್ನುತ್ತವೆ ಸಂಶೋಧನೆಗಳು.
ಕಲ್ಪನಾ ಸಾಮರ್ಥ್ಯ:
ಇಂದಿನ ಮಕ್ಕಳು ಕಲ್ಪಿಸುವ, ಅದರಲ್ಲೂ, ಅವರದ್ದೇ ಆದ ಚಿತ್ರಗಳನ್ನು ಮೂಡಿಸಿಕೊಳ್ಳುವ ಸಾಮರ್ಥ್ಯವನ್ನು ಟೀವಿಯಿಂದ ಕಳೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಈ ಕುರಿತಾಗಿ ದಶಕಗಳಿಂದ ಸಂಶೋಧನೆ ಮಾಡುತ್ತಿರುವ ಹಾರ್ಲೈನ್ ಗೀಸ್ಲರ್ ಎಂಬ ಸಂಶೋಧಕ. ಟೀವಿ ಅವರನ್ನು ಕಲ್ಪಿಸಿಕೊಳ್ಳಲು ಬಿಡದೇ ಯಾರದ್ದೊ ಚಿತ್ರವನ್ನು ಅವರಿಗೆ ನೀಡುತ್ತದೆ, ಇದರಿಂದ ತಮ್ಮದೇ ಆದ ಚಿತ್ರಗಳನ್ನು ಮನಸ್ಸಿನಲ್ಲಿ ಮೂಡಿಸುವ ಕಲ್ಪನಾ ಸಾಮರ್ಥ್ಯವನ್ನು ಅದು ಕೊಲ್ಲುತ್ತದೆ ಎನ್ನುತ್ತಾರವರು. ಉದಾಹರಣೆಗೆ ನೀವು ಕಥೆಯಲ್ಲಿ ‘ಆ ರಾಕ್ಷಸನಿಗೆ ಕುಂಬಳಕಾಯಿಯಂತಹ ತಲೆಯಿತ್ತು’ ಎಂದರೆ ಆಗ ಮಗು ಕುಂಬಳಕಾಯಿಯನ್ನು ನೆನಪಿಸಿಕೊಂಡು ಅದನ್ನು ಮನುಷ್ಯನ ತಲೆಯೊಂದಿಗೆ ಸಮೀಕರಿಸಿಕೊಂಡು ಅದಕ್ಕೆ ಕಣ್ಣು ಮೂಗುಗಳನ್ನು ಮೂಡಿಸಿ ತನ್ನದೇ ಆದ ಚಿತ್ರವೊಂದನ್ನು ಮೂಡಿಸಿಕೊಳ್ಳಬೇಕಾಗುತ್ತದೆ. ಅಂದರೆ ಮೂಡಿದ ಚಿತ್ರ ಸಂಪೂರ್ಣವಾಗಿ ಆ ಮಗುವಿನದೇ ಕಲ್ಪನೆ. ನೂರುಮಕ್ಕಳಿಗೆ ಈ ಕಥೆಯನ್ನು ಹೇಳಿ ಅವರ ಕಲ್ಪನೆಯನ್ನು ಚಿತ್ರಿಸಲು ಹೇಳಿದರೆ ನೂರು ಚಿತ್ರಗಳೂ ಭಿನ್ನವಾಗಿರುತ್ತದೆ ಮತ್ತು ಸೃಷ್ಟಿಶೀಲವಾಗಿರುತ್ತವೆ. ಆದರೆ ಟೀವಿಯಲ್ಲಿ ಮಗು ಇನ್ನಾರೋ ಮಾಡಿದ ಕಲ್ಪನೆಯನ್ನು ತನ್ನದಾಗಿಸಿಕೊಳ್ಳುತ್ತದೆ. ಸ್ವಂತಿಕೆಗೆ ಅಲ್ಲಿ ಅವಕಾಶವಿಲ್ಲ.

ತರ್ಕಬದ್ಧ ಆಲೋಚನೆ:
ಇಂದಿನ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖ್ಯ ಆವಶ್ಯಕತೆ ತರ್ಕಬದ್ಧ ಆಲೋಚನೆ (Logical reasoning). ಇದನ್ನು ಬೆಳೆಸಿಕೊಳ್ಳಲು ಭಾರತೀಯ ಕಥೆಗಳ ಉಪಯೋಗದಿಂದ ಸಾಧ್ಯ ಎನ್ನುತ್ತಾರೆ ಡಾ.ಪವನಜ. ಉದಾಹರಣೆಗೆ ಸುಧನ್ವನ ಕಥೆ. ಕಥೆಯ ಅಂತ್ಯದಲ್ಲಿ ಒಂದು ಸನ್ನಿವೇಶ ಬರುತ್ತದೆ. ಮೂರು ಬಾಣಗಳಲ್ಲಿ ಸುಧನ್ವನನ್ನು ಕೊಲ್ಲುತ್ತೇನೆಂದು ಅರ್ಜುನ ಪ್ರತಿಜ್ಞೆಗೈದಿರುತ್ತಾನೆ. ಬಿಟ್ಟ ಮೂರೂ ಬಾಣಗಳನ್ನು ತುಂಡರಿಸುತ್ತೇನೆಂಬುದು ಭಕ್ತ ಸುಧನ್ವನ ಪ್ರತಿಜ್ಞೆ. ಎರಡು ಬಾಣಗಳನ್ನು ಅರ್ಜುನ ಬಿಟ್ಟು ಸುಧನ್ವ ತುಂಡರಿಸಿ ಆಗುತ್ತದೆ. ಇನ್ನುಳಿದಿರುವುದು ಒಂದೇ ಬಾಣ. ಈಗ ಇಬ್ಬರು ಭಕ್ತರ ಪ್ರತಿಜ್ಞೆಯೂ ಒಂದೇ ಬಾಣದಿಂದ ನೆರೆವೇರುವಂತೆ ಮಾಡಬೇಕಾದ ಅನಿವಾರ್ಯತೆ ಕೃಷ್ಣನಿಗೆ. ಕಥೆಗೆ ಕಿಂಚಿತ್ ವಿರಾಮ ನೀಡಿ ಈಗ ನಿಮ್ಮ ಮಗುವಿಗೆ ಕೇಳಿ, ಕೃಷ್ಣ ಈಗ ಏನು ಮಾಡಬಹುದೆಂದು. ಮಗು ಯೊಚಿಸತೊಡಗುತ್ತದೆ. ಅರ್ಜುನ ಬಿಟ್ಟ ಬಾಣ ಸುಧನ್ವನಿಂದ ಅರ್ಧ ತುಂಡರಿಸಲ್ಪಟ್ಟು ಉಳಿದರ್ದದಲ್ಲಿ ಸುಧನ್ವನನ್ನು ಕೊಲ್ಲುತ್ತದೆ ಎನ್ನುವ ಉತ್ತರದ ಹುಡುಕಾಟ ಒಂದು ತಾರ್ಕಿಕ ಆಲೋಚನಾಕ್ರಮವನ್ನು ನಿಮ್ಮ ಮಗುವಿನಲ್ಲಿ ಬೆಳೆಸುವುದರಲ್ಲಿ ನಿಸ್ಸಂಶಯ.


ಸಂವಹನಾ ಸಾಮರ್ಥ್ಯವೃದ್ದಿ:
ನಮ್ಮ ಮೆದುಳು ತನಗೆ ದೊರೆಯುವ ಎಲ್ಲ ಮಾಹಿತಿಗಳನ್ನು ಅದರ ಪರಿಸರ ಸನ್ನಿವೇಶಗಳ ಚಿತ್ರಣದೊಂದಿಗೆ ನೆನಪಿಟ್ಟುಕೊಳ್ಳುತ್ತದೆ ಮತ್ತು ಹೊರಹಾಕುವ ಸಮಯದಲ್ಲೂ ಅದೆಲ್ಲ ವಿವರಗಳೊಂದಿಗೆ ಹೊರಹಾಕುತ್ತದೆ. ಹೀಗಾಗಿ, ಕಥೆಯ ಕೇಳುವಿಕೆಯಿಂದ, ಕೇವಲ ಶಬ್ದಗಳು ದಾಖಲುಗೊಂಡು ಅವು ಮಾತಾಗಿ ಹೊರಬರಲು ಅನುಕೂಲವುಂಟು. ಇದು ಉತ್ತಮ ಸಂವಹನಾ ಸಾಮರ್ಥ್ಯಕ್ಕೆ ಪೋಷಕ. ಜೊತೆಗೆ ಅವರ ಶಬ್ದಭಂಡಾರವನ್ನು ವೃದ್ಧಿಸುತ್ತದೆ ಕೂಡ. ಟೀವಿಯಲ್ಲಿ ಅದು ದೃಶ್ಯವಾದುದರಿಂದ ಅದನ್ನು ಮತ್ತೆ ಹೊರತರಬೇಕಾದರೆ ಅಲ್ಲಿನ ಎಲ್ಲ ಆಗಿಂಕ ಅಭಿನಯ, ಸನ್ನಿವೇಶಗಳ ಜೊತೆಯಲ್ಲಿ ಹೊರತರಬೇಕಾದುದರಿಂದ, ಆ ಪ್ರತಿಭೆ ಇಲ್ಲದ ಮಕ್ಕಳು ದಾಖಲುಗೊಂಡ ಅಂಶಗಳನ್ನು ಹೊರತರುವ ಪ್ರಕ್ರಿಯೆಯಿಂದಲೇ ವಿಮುಖರಾಗುತ್ತಾರೆ ಎನ್ನುತ್ತದೆ ಒಂದು ಸಂಶೋಧನೆ. ಇದರಿಂದ ಅವರ ಆರೋಗ್ಯಕರ ಸಂವಹನ ಕಡಿಮೆಯಾಗುತ್ತಾ ಹೋಗುತ್ತದೆ. ಇನ್ನೊಂದು ಗಣನೀಯ ಅಂಶವೆಂದರೆ ದೃಶ್ಯಮಾಧ್ಯಮದಲ್ಲಿನ ಸಂವಹನದ ಅತಿವೇಗ ಮತ್ತು ಏಕಮುಖತೆ. ಟೀವಿ ಕಾರ್ಯಕ್ರಮಗಳ ಹೂರಣವನ್ನು  ಪ್ರಾಯೋಜಕರ ಹಿತಾಸಕ್ತಿ ನಿರ್ಧರಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳಿಗೆ ಅತಿಯಾದ ರೋಚಕತೆ ಆವಾಹಿಸಲ್ಪಡುತ್ತದೆ. ಈ ಅತಿಯಾದ ರೋಚಕತೆ ಮಕ್ಕಳನ್ನು ಹಿಂಸೆಗೆ, ಬೇರೆ ಬೇರೆ ಮಾನಸಿಕ ಖಾಯಿಲೆಗಳಿಗೆ ಈಡುಮಾಡುತ್ತಿರುವುದು ನಮಗೆಲ್ಲರಿಗೂ ಗೊತ್ತಿದ್ದದ್ದೆ, ಮರೆತಿದ್ದೇವೆ. ಇದಲ್ಲದೇ, ಮದ್ಯೆ ಮದ್ಯೆ ಅರ್ಥವಾಗದಿದ್ದನ್ನು ಪ್ರಶ್ನಿಸುವ, ಆ ಘಟನೆಗಳ ಆಶಯವನ್ನು ಗುರುತಿಸುವ ಶಕ್ತಿಯನ್ನು ಕೂಡ ದೃಶ್ಯಮಾಧ್ಯಮದ ಅತಿಯಾದ ವೇಗ ಹಾಳುಮಾಡುತ್ತದೆ ಎನ್ನುವುದು ಇಲ್ಲಿ ಪ್ರಸ್ತಾಪಿಸಲ್ಪಡಬೇಕಾದ ಅಂಶ. ಟೀವಿಯ ಏಕಮುಖ ಸಂವಹನೆಯಿಂದ ಪ್ರಶ್ನಿಸುವ ಅಭ್ಯಾಸವನ್ನೇ ಕಳೆದುಕೊಳ್ಳುತ್ತಾರೆ ಮಕ್ಕಳು. ಕಥೆ ಹೇಳುವುವಾಗ ಅಲ್ಲಿ ಯೋಚಿಸಲು, ಅರ್ಥವಾಗದಿದ್ದನ್ನು ಪ್ರಶ್ನಿಸಲು, ಕಾಲ್ಪನಿಕ ಅಂಶಗಳನ್ನು ವಾಸ್ತವಿಕತೆಯೊಂದಿಗೆ ಸಮೀಕರಿಸಲು ಅವಕಾಶಗಳುಂಟು. ಅಲ್ಲದೇ ನಾವು ಕಥೆಯನ್ನು ಹೇಳುವಾಗ ಪ್ರತಿವಾಕ್ಯಗಳಲ್ಲೂ ಅವ್ಯಕ್ತವಾಗಿ ನಮ್ಮ ವ್ಯಕ್ತಿತ್ವವನ್ನೇ ಪ್ರತಿನಿಧಿಸಿರುತ್ತೇವೆ. ಇದರಿಂದ ನಮ್ಮ ಒಲವು ನಿಲುವುಗಳನ್ನು ಅರ್ಥೈಸಿಕೊಳ್ಳಲು ಮಕ್ಕಳಿಗೆ ಸುಲಭವಾಗುತ್ತದೆ.


ಅನಪೇಕ್ಷಿತ ಪರಿಣಾಮಗಳು:
ತಾವು ಮಕ್ಕಳಿಗೆ ಬಾಲ ಹನುಮ್ ತರಹದ ಆಯ್ದ ಕಾರ್ಯಕ್ರಮಗಳನ್ನು ತೋರಿಸುತ್ತೇವೆ ಅಷ್ಟೆ ಎನ್ನುತ್ತಾರೆ ಕೆಲವರು. ಆದರೆ ಇದೂ ಕೂಡ ಕಥೆ ಹೇಳುವಿಕೆಗೆ ಪರ್ಯಾಯ ಆಗಲಾರದು. ಟೀವಿ ಎಷ್ಟೋ ಬಾರಿ ಆವಶ್ಯಕತೆಗಿಂತ ಹೆಚ್ಚು ಪರಿಣಾಮಕಾರಿ. ಹನುಮಂತನ ಸಾಹಸದ ಧಾರಾವಾಹಿಗಳನ್ನು ನೋಡಿ ಅದನ್ನು ಅನುಕರಿಸಲು ಹೋಗಿ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡವರೆಷ್ಟೋ ಮಂದಿ. ಶಕ್ತಿಮಾನ್ ಎಂಬ ಧಾರಾವಾಹಿಯಂತೂ ಈ ವಿಷಯದಲ್ಲಿ ಕುಖ್ಯಾತವಾಗಿತ್ತು. ನೀವೆ ಈ ಕಥೆ ಹೇಳುವುದಾಗಿದ್ದರೆ ಮಗುವಿಗೆ ಕಥೆ ಯಾವ ಪರಿಣಾಮಬೀರುತ್ತಿದೆ ಎಂಬುದನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ಕಥೆಯ ರೋಚಕತೆಯಲ್ಲಿ ವ್ಯತ್ಯಯ ಮಾಡುತ್ತಿದ್ದಿರಲ್ಲವೆ?

ಇದಲ್ಲದೇ, ಭಾರತೀಯ ಕಥೆಗಳ ಕೇಳ್ಮೆಯಿಂದ ಮಾತ್ರ ಉಂಟಾಗುವ ಅನೇಕ ಲಾಭಗಳು ಅದರ ಹಿರಿಮೆ.
ನೈತಿಕತೆ: ನಮ್ಮ ಎಲ್ಲ ಕಥೆಗಳ ಒಂದು ಸಾಮಾನ್ಯ ಅಂಶವೆಂದರೆ ಒಳಿತಿನ ಗೆಲುವು, ಕೆಡುಕಿನ ಸೋಲು. ಇದು ಬಾಲ್ಯದಿಂದಲೇ ಮಕ್ಕಳ ಒಳಮನಸ್ಸು ಸತ್ಯದೆಡೆಗೆ ಒಂದು ಒಲುಮೆಯನ್ನು ಬೆಳೆಸಿಕೊಳ್ಳುತ್ತಾ ಹೋಗುವಂತೆ ಮಾಡುತ್ತದೆ. ಮುಂದೆಂದೋ ಒಂದು ದಿನ, ಒಂದೊಮ್ಮೆ ಸತ್ಯದ ಹಾದಿಯಿಂದ ವ್ಯಕ್ತಿ ಚ್ಯುತನಾಗುವ ಸಂದರ್ಭ ಬಂದರೆ ಬಾಲ್ಯದ ಕಥೆಗಳಿಂದುಂಟಾದ ಸಂಸ್ಕಾರಗಳಿಂದ ಒಳಮನಸ್ಸು ವಿವೇಕವೊಂದನ್ನು ಮೂಡಿಸಿ ಆತನ ನೈತಿಕತೆಯನ್ನು ಬಲವಾಗಿಸುತ್ತದೆ, ಪತನವನ್ನು ತಡೆಯುತ್ತದೆ.
ಸತ್ಯಾನ್ವೇಷಣೆ: ಭಾರತೀಯ ದರ್ಶನ ಶಾಸ್ತ್ರವು ಹೇಳುವಂತೆ ಸತ್ಯಾನ್ವೇಷಣೆ ಜೀವಿಯ ಮೂಲಭೂತ ಸ್ವಭಾವವೇ ಆದುದರಿಂದ ಕಥೆಯ ಅಂತ್ಯದಲ್ಲಿ ಬರುವ ಸತ್ಯದ ವಿಜಯ, ಅಥವಾ ದೊರೆಯುವ ನಿಜ ಮನಸ್ಸಿನ ಆಳದ ಸತ್ಯದ ಹಪಹಪಿಕೆಯನ್ನು ಕಿಂಚಿತ್ ಶಮನ ಮಾಡಿ ಒಂದಷ್ಟು ನೆಮ್ಮದಿಯನ್ನೀಯುತ್ತದೆ. ಇದೇ ಪರಮಸತ್ಯದ ಅನ್ವೇಷಣೆಗೆ ತೊಡಗುವಂತೆ ಪ್ರೇರೆಪಿಸಲು ಕಾರಣವಾಗಬಹುದು ಎನ್ನುತ್ತಾರೆ ಪ್ರಾಜ್ಞರು.ಭಯನಿವಾರಣೆ: ಸಹಜವಾಗಿ ಮಕ್ಕಳ ಮನಸ್ಸಿನಲ್ಲಿ ಇರಬಹುದಾದ ಭಯವನ್ನು ‘ತಾನು ಸತ್ಯವನ್ನು ನೆಚ್ಚಿದರೆ ಸತ್ಯಪ್ರಿಯನಾದ ಭಗವಂತನು ತನ್ನನ್ನು ರಕ್ಷಿಸುತ್ತಾನೆ’ ಎಂಬ ಕಥೆಗಳಿಂದ ಪ್ರೇರಿತವಾದ ಭಾವನೆ, ಭರವಸೆಯನ್ನು ಹುಟ್ಟಿಸಿ ಭಯವನ್ನು ಹೋಗಲಾಡಿಸುತ್ತದೆ. ಭಾರತೀಯ ಕಥೆಗಳಲ್ಲಿ ಪ್ರಸ್ತಾಪವಾಗುವ ಭಗವಂತನ ಸರ್ವವ್ಯಾಪಕತೆ ಭಯನಿವಾರಣೆಯಲ್ಲಿ ಪ್ರಮುಖ ಅಂಶ. ಇದು, ಭಯವಾದಾಗಲೆಲ್ಲ ಕಾಲದೇಶಗಳ ಗಣನೆಯಿಲ್ಲದೇ ರಕ್ಷಿಸಲು ಬರುವವನೊಬ್ಬನು ತನ್ನ ಹತ್ತಿರದಲ್ಲೇ ಇದ್ದಾನೆಂಬ ಸಂಗತಿ ಮನಸ್ಸಿಗೆ ತೋರಿ ‘ಮೊನೊಫೂಬಿಯ’ ಎಂಬ ಮಾನಸಿನ ಖಾಯಿಲೆಯ ತಡೆಯುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಮಾನಸಿಕ ತಜ್ಞರು ಗುರುತಿಸುತ್ತಾರೆ.


ಭಾವಜಾಗೃತಿ: ಕಥೆಗಳ ಮೂಲಕ ಉಂಟಾಗುವ ಮತ್ತೊಂದು ಮಹತ್ತರ ಪ್ರಯೋಜನವೆಂದರೆ ಭಾವ ಸಂಚಲನ. ಪ್ರೀತಿ, ದಯೆ, ಸಹನೆ, ಇತ್ಯಾದಿಗಳಲ್ಲದೇ ಭಕ್ತಿ, ಭಗವತ್ಪ್ರೀತಿ, ವೈರಾಗ್ಯ ಇತ್ಯಾದಿ ಉದಾತ್ಥ ಗುಣಗಳೂ ಕಥೆಗಳಿಂದ ಮೂಡುತ್ತದೆ. ಇದರೊಟ್ಟಿಗೆ, ರಾಮಾಯಣ ಮಹಾಭಾರತದ ಕಥೆಗಳಲ್ಲಿ, ಯೋಗದ ಒಳಮಾರ್ಗದಲ್ಲಿ ಕಾಣುವ ಅನೇಕ ಸತ್ಯಗಳು ರಹಸ್ಯವಾಗಿ ಪ್ರಕ್ಷೇಪಿಸಲ್ಪಟ್ಟಿವೆ ಎಂದು ತಿಳಿದವರು ಹೇಳುತ್ತಾರೆ. ಆ ಎಲ್ಲ ವಿವರಗಳೂ ಯೋಗದ ಒಳಮಾರ್ಗಗಳನ್ನು ತೆರೆಯಲು ಪೂರಕವಾದವುಗಳು. ಆಂತರಿಕ ಜಗತ್ತಿನ ಪ್ರವೇಶಕ್ಕೆ ಬೇಕಾದ ಸಂಸ್ಕಾರಗಳನ್ನು ಅವ್ಯಕ್ತವಾಗಿ ನೀಡುವ ಮಹಾನಿಕ್ಷೇಪಗಳು. ಅದ್ವಿತೀಯವಾದವುಗಳು ಕೂಡ. ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು ಈ ಹಿನ್ನೆಲೆಯಲ್ಲಿ ‘ರಾಮಕಥೆ’ಯೆಂಬ ವಿಶಿಷ್ಟ ಕಥನಪ್ರಾಕಾರವನ್ನು ಜನಜನಿತಗೊಳಿಸುತ್ತಿದ್ದಾರೆ. ರಾಮಾಯಣದ ಅಂತಸ್ಸತ್ವವನ್ನು ಪುಟ್ಟಮಗುವಿಗೂ ಅರ್ಥವಾಗುವಂತೆ ಬಿಡಿಸಿ ರಂಜನೀಯವಾಗಿ ಹೇಳಲ್ಪಡುವ ರಾಮಕಥೆ ಬದುಕಿನಲ್ಲಿ ಮತ್ತೆ ಮತ್ತೆ ಕಾಣಲಾಗದ ಅಪರೂಪದ ಸಂಗತಿ. ಸಂಗೀತ, ಚಿತ್ರ, ನೃತ್ಯ ಇವೆಲ್ಲವುಗಳನ್ನು ಬಳಸಿ ಹೇಳಲ್ಪಡುವ ರಾಮಕಥೆಯನ್ನು ಕೇಳುವುದು ನಿಜಕ್ಕೂ ಒಂದು ದಿವ್ಯಾನುಭೂತಿ.
ಹೀಗೆ ಕಥೆಗಳನ್ನು ಮಕ್ಕಳಿಗೇ ಹೇಳಲೇಬೇಕಾದುದಕ್ಕೆ ನೂರಾರು ಕಾರಣಗಳು.

ಒಂದು ಸುಸಂಸ್ಕೃತ ಜನಾಂಗ ನಿರ್ಮಾಣದ ಬುನಾದಿ ನಮ್ಮ ಪರಂಪರೆಯ ಕಥೆಗಳಲ್ಲಿದೆ. ಕಥೆ ಹೇಳುವ ಸಂಸ್ಕೃತಿ ನಮ್ಮ ಮಕ್ಕಳ ಭವಿಷ್ಯವನ್ನು ಇನ್ನಷ್ಟು ಚಂದಗೊಳಿಸುವ ಎಲ್ಲ ಸಾಮರ್ಥ್ಯಗಳನ್ನೂ ಒಳಗೊಂಡಿದೆ ಎಂಬುದರಲ್ಲಿ ನಿಸ್ಸಂಶಯ.
ಬನ್ನಿ, ಪರಂಪರೆಯು ನಮಗಿತ್ತ ಈ ‘ಉಚಿತ’ ಉಪಕರಣವನ್ನು ಬಳಸಿ ನಾಳಿನ ತಲೆಮಾರಿನ storytellingಭವಿತವ್ಯವನ್ನು ‘ಭದ್ರ’ವಾಗಿಸೋಣ. ನಮ್ಮ ಮಕ್ಕಳು, ಸಂಸ್ಕೃತಿಯ ಉದಾತ್ಥಪಾತ್ರಗಳ ಶ್ರವಣ-ಸ್ಮರಣ-ಮನನಗಳಲ್ಲಿ ನೈಜ ಭಾರತೀಯರಾಗಲಿ. ಆ ಮಹತ್ಪಾತ್ರರ ಮಹತಿಯನ್ನು ಮನಗಂಡು, ಮುದಗೊಂಡು, ತಮ್ಮಲ್ಲಿ ತುಂಬಿಕೊಂಡು, ಹದಗೊಂಡು ಸತ್ಪಾತ್ರರಾಗಲಿ.  ಹೌದು! ದಿವಾನಖಾನೆಯ ಭ್ರಾಂತ ಜಗತ್ತಿನಿಂದ ಕೆಲಹೊತ್ತಾದರೂ ನಮ್ಮ ಮಕ್ಕಳನ್ನು ಮುಕ್ತಿಗೊಳಿಸುವ ನಿರ್ಧಾರಕ್ಕೆ ಶುಭಗಳಿಗೆ ಇಂದೇ. ಇಂದಲ್ಲವಾದರೆ ಮುಂದೆಂದೂ ಇಲ್ಲ. ಬನ್ನಿ, ಮಗುವನ್ನು ಕಂಕುಳಿನಲ್ಲಿ ಇರುಕಿಕೊಂಡು, ನಿಧಾನಕ್ಕೆ ಅನುನಯಿಸುತ್ತಾ, ಟೆರೆಸಿನಿಂದ ತುಸುದೂರದಲ್ಲೇ ಕಾಣುವ ಚಂದಮಾಮನನ್ನು ತೋರುತ್ತಾ... ಒಮ್ಮೆ ನೆನಪಿಸಿಕೊಂಡು... ಪ್ರಾರಂಭಿಸೋಣ...
‘ಪುಟ್ಟಾ, ಚಂದಮಾಮ ಗಣೇಶನ ಹೊಟ್ಟೆ ನೋಡಿ...’
             ಓಂ ಶಾಂತಿ:ಶಾಂತಿ:
(ಧರ್ಮಭಾರತೀ ಪತ್ರಿಕೆಯ ಜೂನ್ ಸಂಚಿಕೆಯಲ್ಲಿ ಪ್ರಕಟಿತ)