Friday, February 1, 2013

"ಮಂತ್ರ-ವಿಜ್ಞಾನ" - 1


  ನಮ್ಮ ಸುತ್ತಲಿನ ದೇವತಾರಾಧನೆಗೆ ಸಂಬಂಧಿಸಿದ ಸಂಗತಿಗಳನ್ನೊಮ್ಮೆ ಅವಲೋಕಿಸಿದರೆ, ಮಂತ್ರಗಳಿಗೆ ಉಳಿದೆಲ್ಲಕ್ಕಿಂತ ಹೆಚ್ಚಿನ ಪ್ರಾಧಾನ್ಯ ಇರುವಂತೆ ತೋರಿಬರುತ್ತದೆ. ಧ್ಯಾನ, ಪ್ರಾರ್ಥನ, ವಂದನ ಇತ್ಯಾದಿಗಳಿಗಿಂತ ಮಂತ್ರ ಬದುಕಿನ ಲೌಕಿಕ-ಪಾರಮಾರ್ಥಿಕ ಲೋಕಗಳ ಪ್ರಮುಖ ಕೊಂಡಿಯಾಗಿ ಪರಿಣಮಿಸಿದೆ. ’ಕರಾಗ್ರೆ ವಸತೇ’ ಎಂಬ ಪ್ರಭು ರಾಮನ ಸ್ಮರಣೆ ಇಂದ ಪ್ರಾರಂಭವಾದ ದಿನ ’... ದುಸ್ಸ್ವಪ್ನ ನಾಶನಂ’ ಎಂಬ ರಾಮದಾಸ ಹನುಮಂತನ ಸ್ಮರಣೆಯಲ್ಲಿ ಮುಕ್ತಾಯ. ಹುಟ್ಟಿದ ಮಗುವಿನ ಕಿವಿಯಲ್ಲಿ ನಾರಾಯಣ ಮಂತ್ರಜಪದ ಉಚ್ಚಾರಣೆಯಿಂದ ಪ್ರಾರಂಭವಾದ ಬಾಳಾಟ ಅಪರಸಂಬಂಧಿ ಮಂತ್ರಗುಚ್ಚಗಳಲ್ಲಿ ಮುಕ್ತಾಯ. ವಿಘ್ನವಿನಾಶಕನ ಮಂತ್ರದಿಂದ ಮಂಗಳಾದಿಗೊಂಡ ಕಾರ್ಯವೊಂದಕ್ಕೆ ಮುಕ್ತಾಯ ನೀಡುವುದು ಮಂಗಳಮಯನಾದ ಹರಿಯ ಮಂತ್ರ. ಬದುಕಿನ ಪ್ರತಿಮಜಲಿನಲ್ಲಿ ಎದುರಾಗುವ ಒಳಿತು-ಕೆಡುಕುಗಳಿಗೆಲ್ಲ ಒಂದೊಂದು ಮಂತ್ರ.  ಉಳುಕಿಗೆ ಮಂತ್ರ, ಮನದ ಅಳುಕಿಗೆ ಮಂತ್ರ, ಬಾಳ ಹುಳುಕಿಗೆ ಮಂತ್ರ, ಭವದ ಕೊಳಕಿಗೆ ಮಂತ್ರ... ಮಂತ್ರದ ಬಳಕೆಯಿಲ್ಲದ ಕ್ಷಣವೊಂದು ಭಾರತೀಯನ ಬದುಕಿನಲ್ಲಿ ಇಲ್ಲವೇ ಇಲ್ಲವೇನೋ ಎಂಬ ಹಾಗಿದೆ ಜೀವನದ ಆದ್ಯಂತವಾಗಿ ವ್ಯಾಪಿಸಿರುವ ಮಂತ್ರಜಾಲ!

     ಬಾಳಿನ ಪ್ರತಿ ಸಂಗತಿಯನ್ನೂ ಮಂತ್ರದೊಂದಿಗೆ ತನ್ಮೂಲಕ ಭಗವಂತನೊಂದಿಗೆ ಜೋಡಿಸುವ ಆರ್ಷ ಪರಂಪರೆ ಒಂದೆಡೆಯಾದರೆ,  ಭೌತಿಕ ಮಾಪಕಗಳ ಮೇಲೆ ಎಲ್ಲವನ್ನೂ ಅಳೆಯ ಹೊರಡುವ ನವೀನ ಜನಾಂಗ ಒಂದೆಡೆ. ಅಂತರಂಗದಲ್ಲಿ ಕಾಣುವ ಭೌಮಾನುಭೂತಿಯನ್ನು ಚರ್ಮಚಕ್ಷುಸ್ಸಿನಿಂದ ಕಾಣಲಾಗದೆಂಬ ಪಾರಂಪರಿಕ ನಂಬಿಕೆ ಹಳೆಬೇರಿಗಾದರೆ ಎಲ್ಲವನ್ನು ಭೌತಿಕ ಸಾಮಗ್ರಿಗಳ ಸಹಾಯದಿಂದ ಇಂದ್ರಿಯಗಳ ಮೂಲಕ ಅಳೆದೇವೆಂಬ ಹಮ್ಮು ಹೊಸ ಚಿಗುರಿಗೆ. ನಂಬಿಕೆ ಶ್ರದ್ಧೆಗಳಿಲ್ಲದೆ ಸತ್ಯ ಕಾಣದು ಎನ್ನುವ ವಾದ ಒಂದೆಡೆಯಾದರೆ 'ಸತ್ಯ ಕಾಣದೆ ನಂಬಿಕೆ ಇಡೆನು' ಎಂಬ ವಾದ ಇನ್ನೊಂದೆಡೆ. ಹಾಗಾಗಿ ಎತ್ತು ಏರಿಗೆ ಕೋಣ ನೀರಿಗೆ ಎಂಬಂತೆ ಹಳೆ-ಹೊಸ ತಲೆಮಾರಿನ ನಡುವೆ ದಿನದಿನವೂ ವಿಸ್ತರಿಸುತ್ತಿದೆ ಕಂದಕ. 

     ಇಂತಹ ವೈಪರೀತ್ಯಕ್ಕೆ ಕಾರಣವಿಷ್ಟೆ. ಒಂದು ಅಂತರಂಗವನ್ನು ಹುಡುಕುವ ವಿಜ್ಞಾನವಾದರೆ ಮತ್ತೊಂದರ ಸತ್ಯದ ಹುಡುಕಾಟ ಬಹಿರಂಗದಲ್ಲಿ. ಅಂತರಂಗದಲ್ಲಿ ಸತ್ಯವನ್ನು ಕಂಡುಕೊಂಡ ಮನೀಷಿಗಳಿಗೆ ಬಹಿರಂಗದ, ಅಂತರಂಗದ ಸತ್ಯಕ್ಕೆ ಪೂರಕವಲ್ಲದ ಸಂಗತಿಗಳು ಮಹತ್ತ್ವದ್ದೆನಿಸದಿದ್ದರೆ  ಬಹಿರಂಗದ ಭೌತಿಕ ಸಾಮಗ್ರಿಗಳಲ್ಲಿ ಸತ್ಯಶೋಧನೆಯಲ್ಲಿ ನಿರತರಾದವರಿಗೆ ಅಂತರಂಗದ ಕಡೆಗೆ ಗಮನವೀಯಲು ವ್ಯವಧಾನವಿಲ್ಲ.
 ಹಾಗಾದರೆ ಎರಡನ್ನೂ ಏಕತ್ರಗೊಳಿಸುವ, ಆಧುನಿಕ ವಿಜ್ಞಾನದ ನೋಟದಿಂದ ಆರ್ಷವಿಜ್ಞಾನದ ಸಂಗತಿಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನಗಳು ನಡದೇ ಇಲ್ಲವೇ ಎಂದು ಹುಡುಕ ಹೊರಟರೆ ಪರಿಸ್ಥಿತಿ ಅಷ್ಟೇನೂ ಚಿಂತಾದಾಯಕವಾಗಿಲ್ಲ ಎಂದು ಕಂಡುಬರುತ್ತದೆ. ಸನಾತನೋಕ್ತ ಸಂಗತಿಗಳನ್ನು ತನ್ನದೇ ವಿಧಾನದಲ್ಲಿ ಅಳೆಯುವ, ಅರ್ಥಮಾಡಿಕೊಳ್ಳುವ, ನಿರಾಕರಿಸುವ ಯಾ ದೃಢೀಕರಿಸುವ ಪ್ರಯತ್ನಗಳು ಆಧುನಿಕ ವಿಜ್ಞಾನಲೋಕದಲ್ಲಿ ಒಂದಷ್ಟು ನಡೆದಿವೆ. ಇಂತಹ ಬೆಳವಣಿಗೆಗಳ ಬಗೆಗೊಂದು ಬೆಳಕು ಚೆಲ್ಲುವ ಪ್ರಯತ್ನ ಈ ಲೇಖನ ಸರಣಿ. ಈ ಪ್ರಯೋಗಗಳೆಲ್ಲ ಪೂರ್ಣವೇ? ಸತ್ಯವೇ? ಆರ್ಷ-ಆಧುನಿಕ ವಿಜ್ಞಾನಿಗಳ ಮಧ್ಯೆ ಈ ಪ್ರಯೋಗ-ವಿಧಾನ-ಫಲಿತಾಂಶಗಳ ಬಗೆಗೆ ಸಂಪೂರ್ಣ ಸಹಮತ ಏರ್ಪಟ್ಟಿದೆಯೇ? ಎಂಬ ಸಂಗತಿಗಳ ಅಧ್ಯಯನ ಈ ಲೇಖನದ ಉದ್ದೇಶ ಸರ್ವಥಾ ಅಲ್ಲ. ಆರ್ಷ-ಆಧುನಿಕ ವಿಜ್ಞಾನಗಳ ಒಡಂಬಡಿಕೆಗಳಲ್ಲಿ ಆಸಕ್ತಿಯಿರುವ ಮನಸ್ಸುಗಳಿಗೆ 'ಇಲ್ಲಿ ಹೀಗೆ ಇವರು ಪ್ರಯೋಗ ನಡೆಸಿ ಈ ಫಲಿತಾಂಶ ಪಡೆದರು' ಎಂಬ ಸುದ್ದಿಯ ಆಹಾರ ನೀಡುವುದಷ್ಟೇ ಲೇಖನಕ್ಕೆ ಹಾಕಿಕೊಂಡ ಮಿತಿ.

     ಮಂತ್ರಗಳ ಬಗೆಗೆ ಆಧುನಿಕ ವಿಜ್ಞಾನದ ಪ್ರಯೋಗಗಳನ್ನು ಪರಿಶೀಲಿಸುವ ಮುನ್ನ, ಅಸಲಿಗೆ ಮಂತ್ರವೆಂದರೇನು? ಮಂತ್ರಗಳ ಬಗೆಗೆ ಅದನ್ನು ತಂದ ಮಹರ್ಷಿಗಳ ನೋಟವೇನಿತ್ತು ಎಂಬ ಪರಿಚಯ ಮಾಡಿಕೊಳ್ಳೋಣ.

     'ಮನನಾತ್ ತ್ರಾಯತೇ ಇತಿ ಮಂತ್ರಃ| - ಮನನ ಮಾಡುವುದರಿಂದ ರಕ್ಷಿಸುತ್ತದೆ' ಎಂಬುದು ಮಂತ್ರ ಶಬ್ದದ ಅರ್ಥ. ಹಾಗಾದರೆ ಯಾವುದೋ ಶಬ್ದವನ್ನೋ ಶಬ್ದಗುಚ್ಚವನ್ನೋ ಹೇಳಿದ ಮಾತ್ರಕ್ಕೇ ರಕ್ಷಣೆಯಾಗುತ್ತದೆಯೇ? ಮಂತ್ರಕ್ಕೆ ಮಾವಿನಕಾಯಿ ಉದುರುತ್ತದೆಯೇ? ಎಂದರೆ ಮಂತ್ರವನ್ನು ತಂದವರ ನೋಟವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದಾಯ್ತು. 

     ಸಮಸ್ತ ಸೃಷ್ಟಿಯೆಲ್ಲವೂ ಭಗವಂತನ ಉಪಾಧಿಗಳಾದ ಅನೇಕ ದೇವತಾ ಶಕ್ತಿಗಳಿಂದ ನಡೆಸಲ್ಪಡುತ್ತದೆ. ಭಗವಂತನ ಸಾಮ್ರಾಜ್ಯದಲ್ಲಿ ಒಂದೊಂದು ಕಾರ್ಯದ ನಿರ್ವಹಣೆ ಒಂದೊಂದು ಶಕ್ತಿಗಳದ್ದು. ಅವುಗಳೇ ಇಂದ್ರ, ಯಮ, ವರುಣ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ದೇವತೆಗಳು. ಈ ಶಕ್ತಿಗಳಿಗೇಕೆ ದೇವತೆಗಳೆಂಬ ಹೆಸರೆಂದರೆ ಇವುಗಳು ಕೇವಲ ಶಕ್ತಿ ಮಾತ್ರವಲ್ಲದೇ ಅಂತರಂಗದಲ್ಲಿ ಯೊಗಿಯೋರ್ವನಿಗೆ ಇವುಗಳ ಮೂರ್ತರೂಪದ ದರ್ಶನವೂ ಸಾಧ್ಯ ಎಂಬುದಕ್ಕಾಗಿ. ಪ್ರತ್ಯೇಕ ರೂಪ, ಆಕಾರ, ಅಲಂಕಾರಳೊಂದಿಗೆ ಆ ಶಕ್ತಿಯನ್ನು ಅಂತರಂಗದಲ್ಲಿ ಕಂಡುಕೊಂಡ ಯೋಗಿಗಳು, ಆ ಶಕ್ತಿಗಳ ಅನುಗ್ರಹವನ್ನು ಪಡೆಯುವುದು ಸಾಧ್ಯವೆಂದೂ, ಆ ವಿಧಾನ ಇಂತೆಂದೂ ಒಳಕಂಡ ಸತ್ಯವನ್ನು ಹೊರಸಾರಿದರು. ಆ ಮಾರ್ಗವೇ ಮಂತ್ರಗಳು. 
ಮಂತ್ರಗಳೆಂದರೆ ದೇವತೆಯನ್ನು ಪ್ರತಿನಿಧಿಸುವ ಶಬ್ದರೂಪ.  ಮಂತ್ರವೆಂದು ಹೇಳಲ್ಪಡುವ ಶಬ್ದಗುಚ್ಚಗಳಿಗೂ ನಿರ್ದಿಷ್ಟ ದೇವತೆಗೂ ಒಂದು ಅವಿನಾಭಾವ ಸಂಬಂಧದ ಹಿನ್ನೆಲೆಯಲ್ಲಿ ಮಂತ್ರದ ಉಚ್ಚಾರಣೆ ಆ ದೇವತೆಯ ಸಾನ್ನಿಧ್ಯವನ್ನು ತರುತ್ತದೆ ಎಂಬುದು ಆರ್ಷವಿಜ್ಞಾನದ ಮೂಲಭೂತ ಅಂಶ. ಶಕ್ತಿ, ಅದಕ್ಕೊಂದು ಮೂರ್ತರೂಪವಾಗಿ ದೇವತೆ, ಮತ್ತು  ಶಬ್ದಸ್ವರೂಪವಾಗಿ ಮಂತ್ರ ಇವೆಲ್ಲವೂ ಸೃಷ್ಟಿಯಲ್ಲಿ ಸಹಜವಾಗಿ ಇರುವ ಒಂದೇ ವಿಷಯದ ಭಿನ್ನ ಅಭಿವ್ಯಕ್ತಿಗಳು. ವ್ಯಕ್ತಿಯೊಬ್ಬ ಕಲ್ಪಿಸಿದ್ದಲ್ಲ. ಆ ಕಾರಣಕ್ಕೇ ಮಂತ್ರಗಳು ಅಪೌರುಷೇಯ ಎಂದು ಕರೆಯಲ್ಪಡುತ್ತದೆ. ಸೃಷ್ಟಿಯಲ್ಲಿ ಸಹಜವಾಗಿ ಮೊಳಗುತ್ತಿರುವ ಈ ಶಬ್ದಗಳನ್ನು ಅಂತರಂಗದಲ್ಲಿ ಮಹರ್ಷಿಗಳು ಕೇಳಿದ್ದರಿಂದ 'ಶ್ರುತಿ' ಎಂಬುದಾಗಿಯೂ ಮಂತ್ರಗಳನ್ನು ಅಡಕವಾಗಿಸಿಕೊಂಡ ವೇದಕ್ಕೆ ಕರೆಯುತ್ತಾರೆ. ಮಂತ್ರಗಳು ಸೃಷ್ಟಿಯಲ್ಲಿ ಸಹಜವಾಗಿ ಇರುತ್ತವೆ ಎಂಬ ಕಾರಣಕ್ಕೆ ಯಾವ ಮಂತ್ರಕ್ಕೂ 'ರಚಯಿತಾ' ಇರುವುದಿಲ್ಲ. ಮಂತ್ರಕ್ಕೆ 'ದೃಷ್ಟಾರ' ಇರುತ್ತಾನೆ. ಅಂದರೆ ಸೃಷ್ಟಿಯಲ್ಲಿ ಇರುವುದನ್ನು ಆತ ಕಂಡವನು, ಅದು ಆತನದೇ ಕಲ್ಪನೆಯಲ್ಲ ಎಂಬ ಹಿನ್ನೆಲೆಯಲ್ಲಿ ಬಂದ ಶಬ್ದವದು.

     ಅಸಂಖ್ಯ ಶಬ್ದಗಳಿರುವಾಗ ನಿರ್ದಿಷ್ಟ ಶಬ್ದಗಳ ಗುಚ್ಚಕ್ಕೆ ಮಂತ್ರವೆಂಬ ಹೆಸರೇಕೆ ಎಂದರೆ ಅವುಗಳಲ್ಲಿನ ಅಕ್ಷರ ಹಾಗು ಸ್ವರಗಳ ಯೋಜನೆ. ಜೊತೆಗೆ ಈಶ್ವರ ಸಂಕಲ್ಪ. ಮೇಲ್ನೋಟಕ್ಕೆ ಅವು ಕೇವಲ ಶಬ್ದರಾಶಿಯಾದರೂ ಅವುಗಳ ಹಿಂದೆ ಅವು  ಪ್ರತಿನಿಧಿಸುವ ಶಕ್ತಿಯನ್ನು ಸಾಕ್ಷಾತ್ಕಾರಗೊಳಿಸುವ ಒಂದು ವಿಜ್ಞಾನವಿದೆ. ಅಕ್ಷರಗಳ ಸಂಯೋಜನೆ, ಪ್ರತಿ ಅಕ್ಷರಕ್ಕೂ ಅರೋಪಿಸಲ್ಪಟ್ಟ ಸ್ವರಗಳ ಏರಿಳಿತ ( ಉದಾತ್ತ-ಅನುದಾತ್ತ-ಸ್ವರಿತ) ಇವೆಲ್ಲವೂ ಅದರ ಭಾಗಗಳು.  ಇದೆಲ್ಲಕ್ಕೂ ಮುಖ್ಯ ಸಂಗತಿ,  ಮಂತ್ರವೊಂದರ 'ಅರ್ಥ' ಅದರ ಹಿಂದಿನ ದೇವತೆ ಎಂಬುದು. 'ಅರ್ಥ' ಎಂಬ ಶಬ್ದಕ್ಕೆ ನಾವು ಅದನ್ನೇ ಹೋಲುವ ಇನ್ನೊಂದು ಪರಿಚಿತ ಶಬ್ದವನ್ನು ಹೇಳುವ ಪರಿಪಾಠವನ್ನಿಟ್ಟುಕೊಂಡಿದ್ದೇವೆ. ವೃಕ್ಷ ಎನ್ನುವುದರ ಅರ್ಥ ಮರ ಎನ್ನುವ ಹಾಗೆ. ಆದರೆ ನಿಜಕ್ಕೂ ಅರ್ಥವೆಂದರೆ ಮತ್ತೊಂದು ಶಬ್ದವಲ್ಲ, ಬದಲಿಗೆ ಆ ವಸ್ತುವೇ. ಕೃಷ್ಣ ಶಬ್ದದ ಅರ್ಥವೆಂದರೆ ಕೃಷ್ಣನೇ. ಕೃಷ್ಣ ಶಬ್ದವನ್ನು ಅರ್ಥಮಾಡಿಕೊಳ್ಳುವುದೆಂದರೆ ಕೃಷ್ಣನ ಸಾಕ್ಷಾತ್ಕಾರ. ಅದು ಹೇಗೆ ಸಾಧ್ಯವೆಂದರೆ ಅದು ಈಶ್ವರನ ಸಂಕಲ್ಪವೇ ಆಗಿದೆ ಎನ್ನುತ್ತದೆ ತತ್ತ್ವಶಾಸ್ತ್ರ. 'ಅಸ್ಮಾತ್ ಶಬ್ದಾತ್ ಅಯಮರ್ಥೋ ಬೋದ್ಧವ್ಯಃ ಇತಿ ಈಶ್ವರ ಸಂಕಲ್ಪಃ ಶಕ್ತಿಃ'|| ಈ ಶಬ್ದಕ್ಕೆ ಈ ಅರ್ಥ (ಅದರ ಹಿಂದಿನ ವಸ್ತು) ಬರಲಿ ಎಂಬುದು ಸೃಷ್ಟೀಶನ ಸಂಕಲ್ಪವೇ ಆಗಿದೆ. ಹೀಗಾಗಿ ವೃಕ್ಷ ಶಬ್ದವನ್ನು 'ಅರ್ಥ' ಮಾಡಹೊರಟವನಿಗೆ ವೃಕ್ಷದ ಸಾಕ್ಷಾತ್ಕಾರ ಆಗಲೇ ಬೇಕು. ಇದು ಸೃಷ್ಟಿಯ ನಿಯಮ. ಹೀಗಾಗಿ ಮಂತ್ರಗಳ ಪಠನ ಅವುಗಳ ಹಿಂದಿನ ಶಕ್ತಿಯವರೆಗೂ ಕೊಂಡೊಯ್ಯಲೇಬೇಕು. ಅವುಗಳ ಉಚ್ಚಾರಕ್ರಮವರಿತಿರಬೇಕು ಅಷ್ಟೆ. ಆದ್ದರಿಂದಲೇ 'ಶಬ್ದಬ್ರಹ್ಮಣಿ ನಿಷ್ಣಾತ: ಪರಂ ಬ್ರಹ್ಮಾದಿ ಗಚ್ಛತಿ' ಎಂಬ ಮಾತಿದೆ. ಶಬ್ದಗಳ ಮರ್ಮಗಳನ್ನರಿತವನು ಶಬ್ದಗಳ ಹಿಂದಿನ ಮೂಲ ಶಕ್ತಿಯಾದ ಪರಬ್ರಹ್ಮನವರೆಗೂ ಸಾಗಬಲ್ಲ ಎನ್ನುವುದು ತಥ್ಯ.

     ಅಪೌರುಷೇಯವಾದ, ಭಗವತ್ಸಾಕ್ಷಾತ್ಕಾರಕ್ಕೆ ಕಾರಣವಾಗುವ ಈ  ಮಂತ್ರಗಳನ್ನು ವೈದಿಕ ಮಂತ್ರಗಳು ಎಂದು ಕರೆದರು. ಇವುಗಳಲ್ಲದೇ ಲೌಕಿಕ ಮಂತ್ರಗಳು ಎಂಬ ವಿಭಾಗವೂ ಇದೆ. ಓಮ್ ನಮೋ ನಾರಾಯಣಾಯ ಇತ್ಯಾದಿ ಮಂತ್ರಗಳನ್ನು ಲೌಕಿಕ ಮಂತ್ರಗಳೆನ್ನುತ್ತಾರೆ. ಈ ವಿಭಾಗೀಕರಣ ಮಂತ್ರದ ಪರಿಣಾಮದ ದೃಷ್ಟಿಯಿಂದ ಆದುದಲ್ಲ. ಅಧಿಕಾರ ಭೇದದಿಂದ ಆದುದು. ಯಾರಿಗೆ ವೈದಿಕ ಮಂತ್ರಗಳನ್ನು ಹೇಳುವ ಅಧಿಕಾರವಿಲ್ಲವೋ ಅವರು ಗುರೂಪದೇಶದೊಂದಿಗೆ ಲೌಕಿಕ ಮಂತ್ರ ಪಠಣ ಮಾಡಬಹುದು ಎನ್ನುತ್ತಾರೆ ಜ್ಞಾನಿಗಳು.

ಮಂತ್ರಗಳ ಉಚ್ಚಾರಕ್ಕೆ ಮೂರು ಕ್ರಮಗಳು. ಉಚ್ಚೈಃ, ಉಪಾಂಶು ಹಾಗೂ ಮಾನಸ ಎಂಬುದಾಗಿ. ಮನಸ್ಸಿನಲ್ಲಿ ಹೇಳಿಕೊಳ್ಳುವುದು ಮಾನಸವಾದರೆ ಪಿಸುಗುಡುವ ಹಾಗೆ ಹೇಳುವುದು ಉಪಾಂಶು. ಬಾಯಿಯಿಂದ ಶಬ್ದ ಹೊರಬರುವಂತೆ ಹೇಳುವ ಕ್ರಮಕ್ಕೆ ಉಚ್ಚೈಃ ಎಂದು ಹೆಸರು. ಆತ್ಮಸಾಧನೆಗೆ ಹೇಳುವ ಮಂತ್ರಗಳಿಗೆ ಮಾನಸ ಉಚ್ಚರಣೆ ಶ್ರೇಷ್ಠವಾದುದು. ಉಪಾಂಶು ಮಧ್ಯಮ. ಆದರೆ ಲೌಕಿಕ ಪ್ರಯೋಗಗಳಿಗೆ ಶಬ್ದಗಳ ಕೇಳ್ಮೆ ಹೊರಪ್ರಕೃತಿಯ ಹಾಗು ಕೇಳಿದ ವ್ಯಕ್ತಿಗಳ ಮೇಲೆ ಪರಿಣಾಮ ಬೀರುವುದರಿಂದ ಉಚ್ಚೈಃ ಶ್ರೇಷ್ಠ ಎಂಬುದಾಗಿ ಬಲ್ಲವರ ಅಭಿಮತ.

ಇದಿಷ್ಟು ಮಂತ್ರಗಳ ಕುರಿತಾದ ಒಂದು ಪಕ್ಷಿನೋಟ. ಈ ಕುರಿತಾದ ಆಧುನಿಕ ವಿಜ್ಞಾನದ ಪ್ರಯೋಗಗಳ ಕುರಿತು ಮುಂದಿನ ಸಂಚಿಕೆಯಲ್ಲಿ ನೋಡೋಣ.